ಕರ್ನಾಟಕ

ಸಾಲ ಮನ್ನಾ ರೈತರಿಗೆ ಆತಂಕ ಬೇಡ: ಮುಖ್ಯಮಂತ್ರಿ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿರುವಂತೆ ರೈತರ 2 ಲ.ರೂ. ವರೆಗಿನ ಸುಸ್ತಿ ಸಾಲ ಮತ್ತು ಒಂದು ಲ.ರೂ.ವರೆಗಿನ ಚಾಲ್ತಿ ಸಾಲ ಮನ್ನಾ ಆಗಲಿದ್ದು, ಈ ಬಗ್ಗೆ ಜನರಲ್ಲಿ ಆತಂಕ ಬೇಡ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಮೂಲಕ ರೈತರ ಬೆಳೆಸಾಲ ಮನ್ನಾ ಕುರಿ ತಂತೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ ಇದುವರೆಗೆ ಸರಕಾರಿ ಆದೇಶ ಹೊರಬೀಳದ ಕಾರಣ ರೈತರಲ್ಲಿ ಕಾಣಿಸಿಕೊಂಡಿರುವ ಆತಂಕಕ್ಕೆ ಅವರು ತೆರೆ ಎಳೆದಿದ್ದಾರೆ. ಜು. 6ರಂದು ಬಜೆಟ್‌ ಮಂಡಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ 2 ಲ.ರೂ.ವರೆಗಿನ ಸುಸ್ತಿ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೆ ಸಾಲ ಮರುಪಾವತಿ ಮಾಡಿದವರಿಗೆ 25 ಸಾವಿರ ರೂ. ನೀಡುವುದಾಗಿ ಪ್ರಕಟಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನೂ ಪ್ರಕಟಿಸಲಾಗಿತ್ತು. ಆನಂತರ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ (ಜು. 12) ರೈತರ ಒಂದು ಲಕ್ಷ ರೂ.ವರೆಗಿನ ಚಾಲ್ತಿ ಬೆಳೆ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದ್ದರು.

ಈ ಕುರಿತಂತೆ ಇದುವರೆಗೂ ಸರಕಾರಿ ಆದೇಶ ಹೊರಬಿದ್ದಿಲ್ಲ. ಸಹಕಾರ ಬ್ಯಾಂಕ್‌ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಾಲ ಮನ್ನಾ ಕುರಿತಂತೆ ಅಧಿಕೃತ ಮಾಹಿತಿ ರವಾನೆ ಯಾಗಿರಲಿಲ್ಲ. ಹೀಗಾಗಿ ರೈತರು ಸಾಲ ಮನ್ನಾ ಕುರಿತು ವಿಚಾರಿಸಲು ಬ್ಯಾಂಕ್‌ಗೆ ಹೋದಾಗ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂಬ ಮಾಹಿತಿ ಸಿಕ್ಕಿ ಸಾಲ ಮನ್ನಾ ಘೋಷಣೆ ಕುರಿತಂತೆ ರೈತರಲ್ಲಿ ಆತಂಕ ಕಾಣಿಸಿಕೊಂಡಿತ್ತು. ಕೆಲವು ಶಾಸಕರೂ ಸರಕಾರದ ಮಟ್ಟದಲ್ಲಿ ಈ ಬಗ್ಗೆ ವಿಚಾರಣೆ ಮಾಡಿದ್ದರು. ಸಾಲ ಮನ್ನಾ ಆದೇಶ ಹೊರಬಿದ್ದ ತತ್‌ಕ್ಷಣ ಬ್ಯಾಂಕ್‌ಗಳು ರೈತರಿಗೆ ಋಣಮುಕ್ತ ಪತ್ರ ನೀಡಬೇಕಿದ್ದು, ಆನಂತರ ಸರಕಾರ ಈ ಮೊತ್ತವನ್ನು ಬ್ಯಾಂಕ್‌ಗೆ ಸಂದಾಯ ಮಾಡುತ್ತದೆ. ಇದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದೆರಡು ದಿನ ಗಳಲ್ಲಿ ಒಡಂಬಡಿಕೆ ಪ್ರಕ್ರಿಯೆ ನಡೆಯಲಿದೆ ಎಂದರು.

Comments are closed.