ಕರ್ನಾಟಕ

ಕ್ರಸ್ಟ್​ಗೇಟ್ ಮಟ್ಟ ತಲುಪಿದ ಲಿಂಗನಮಕ್ಕಿ ಜಲಾಶಯದ ನೀರು

Pinterest LinkedIn Tumblr

ಕಾರ್ಗಲ್: ಲಿಂಗನಮಕ್ಕಿ ಜಲಾಶಯ ಮಂಗಳವಾರ ಬೆಳಗ್ಗೆ ಕ್ರಸ್ಟ್​ಗೇಟ್ ಮಟ್ಟ ತಲುಪಿದೆ. ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ ಸಮುದ್ರ ಮಟ್ಟದಿಂದ 1,819 ಅಡಿ. ನೀರು 1,795 ಅಡಿ ತಲುಪಿದಾಗ ಕ್ರಸ್ಟ್ ಲೆವೆಲ್​ಗೆ ಬರುತ್ತದೆ. ಜಲಾಶಯದ ಮಟ್ಟ ಈಗ 1,795.50 ಅಡಿಗೆ ತಲುಪಿದೆ. ಅಣೆಕಟ್ಟಿಗೆ ಅಳವಡಿಸಿರುವ ರೇಡಿಯಲ್ ಗೇಟ್​ಗಳನ್ನು ನೀರು ತಲುಪಿದೆ. ಇನ್ನು ಜಲಾಶಯ ಭರ್ತಿಯಾಗಲು ರೇಡಿಯಲ್ ಗೇಟಿನ ಎತ್ತರ ಎಷ್ಟಿದೆಯೋ ಅಂದಾಜು ಅಷ್ಟೇ ಪ್ರಮಾಣದ ನೀರು ಹರಿದುಬರಬೇಕು.

ಲಿಂಗನಮಕ್ಕಿ ಜಲಾಶಯದ ಪ್ರಸ್ತುತ ಮಟ್ಟ 1,795.50 ಅಡಿ. ಅಂದರೆ ನೀರು ಸಂಗ್ರಹವಾಗಿರುವುದು ಜಲಾಶಯದ ಶೇ. 56.15ರಷ್ಟು ಮಾತ್ರ. ಡ್ಯಾಂ ಭರ್ತಿಯಾಗಲು ಈಗಿರುವ ನೀರಿನ ಪ್ರಮಾಣಕ್ಕೆ ಇನ್ನೂ ಶೇ.45ರಷ್ಟು ನೀರು ಬೇಕು.

ಮಂಗಳವಾರ ಬೆಳಗ್ಗೆ 39 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು ಕಳೆದ 24 ಗಂಟೆಗಳಲ್ಲಿ ಅಣೆಕಟ್ಟೆಗೆ ಒಂದೂವರೆ ಅಡಿ ನೀರು ಬಂದಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಜಲಾಶಯ ಮಟ್ಟ 1,765.95 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 30 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.

ಕ್ರಸ್ಟ್​ಗೇಟ್ ಲೆವೆಲ್ ಎಂದರೇನು?: ಅಣೆಕಟ್ಟಿಗೆ ಅಳವಡಿಸಿರುವ 24 ಅಡಿ ಎತ್ತರದ ರೇಡಿಯಲ್ ಗೇಟಿನ ತಳಮಟ್ಟವನ್ನು ನೀರು ತಲುಪಿದೆ. ಇದನ್ನು ಕ್ರಸ್ಟ್​ಗೇಟ್ ಲೆವೆಲ್ ಎಂದು ಕರೆಯುತ್ತಾರೆ. ಈ ಮಟ್ಟವನ್ನು ಬೆಡ್ ಲೆವೆಲ್ ಎಂದೂ ಕರೆಯುತ್ತಾರೆ. ನೀರು ಕ್ರಸ್ಟ್ ಮಟ್ಟ ತಲುಪಿದ್ದರಿಂದ ಕರ್ನಾಟಕ ವಿದ್ಯುತ್ ನಿಗಮ ಗಂಗೆಗೆ ಪೂಜೆ ಸಲ್ಲಿಸುವುದು ವಾಡಿಕೆ. ಇದರೊಂದಿಗೆ ತಾಯಿ ಶರಾವತಿ ಪ್ರಥಮ ಪೂಜೆಗೆ ಪಾತ್ರಳಾಗುತ್ತಾಳೆ. ಪ್ರತಿ ವರ್ಷ ಸಾಮಾನ್ಯವಾಗಿ ನೀರು ಕ್ರಸ್ಟ್ ಲೆವೆಲ್ ತಲುಪಿದಾಗ ಕೆಪಿಸಿ ಗಂಗೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತದೆ. ಇದರ ನಂತರ ಜಲಾಶಯ ಪೂರ್ಣ ಮಟ್ಟ ತಲುಪಿದಾಗ ಮತ್ತೊಮ್ಮೆ ಪೂಜೆ ಸಲ್ಲಿಸಲಾಗುತ್ತದೆ.

Comments are closed.