ಕರ್ನಾಟಕ

ರೇವಣ್ಣ ಮಗನ ವಿರುದ್ಧ ದೂರು ದಾಖಲಿಸಿದ್ದಕ್ಕೆ ಚನ್ನರಾಯಪಟ್ಟಣ ಇನ್ಸ್ ಪೆಕ್ಟರ್ ಗೆ ಕಿರುಕುಳ?

Pinterest LinkedIn Tumblr


ಬೆಂಗಳೂರು: ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿಕೊಂಡಿದ್ದಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಗೆ ಕಿರುಕುಳ ನೀಡಿದಲ್ಲದೇ, ಠಾಣೆಗೆ ಬಾರದಂತೆ ಆದೇಶ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಚುನಾವಣಾ ಸಮಯದಲ್ಲಿ ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ಧ ಕೇಸ್ ದಾಖಲಿಸಿದ್ದ ಚನ್ನರಾಯಪಟ್ಟಣ ಇನ್ಸ್ ಪೆಕ್ಟರ್ ಹರೀಶ್ ಬಾಬುರವರಿಗೆ ಕಿರುಕುಳ ನೀಡುತ್ತಿದ್ದಲ್ಲದೇ ಠಾಣೆಗೆ ಬಾರದಂತೆ ಮೌಖಿಕ ಆದೇಶ ನೀಡಿದ್ದಾರೆ ಎಂದು ದೂರುದಾರ ಶ್ರೇಯಸ್ ಆರೋಪಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದೂರುದಾರ ಶ್ರೇಯಸ್, ಸಚಿವರು ಅಧಿಕಾರ ದುರಪಯೋಗಪಡಿಸಿಕೊಂಡು ಅಧಿಕಾರಿಯನ್ನು ವರ್ಗಾಯಿಸಿದ್ದಾರೆ. ಧಕ್ಷ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಚಿವ ರೇವಣ್ಣರ ಒತ್ತಡಕ್ಕೆ ಮಣಿದ ಹಾಸನ ಎಸ್ಪಿ, ಲಿಖಿತ ಆದೇಶವಿಲ್ಲದೆ ಫೋನ್ ಮೂಲಕವೇ ಠಾಣೆಗೆ ಬಾರದಂತೆ ಇನ್ಸ್ ಪೆಕ್ಟರ್ ಹರೀಶ್ ಬಾಬುಗೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹರೀಶ್ ರವರು ಕಳೆದ 20 ದಿನಗಳಿಂದ ಠಾಣೆಗೆ ಬರುತ್ತಿಲ್ಲ ಎಂದು ಶ್ರೇಯಸ್ ಆರೋಪಿಸಿದರು.

ಮಗನ ಮೇಲೆ ಕೇಸು ಹಾಕಿದ್ದಕ್ಕೆ ಪ್ರತೀಕಾರಕ್ಕಿಳಿದ ಸಚಿವ ರೇವಣ್ಣರವರು, ಹಾಸನ ಎಸ್ಪಿ ರಾಹುಲ್ ಕುಮಾರ್ ಮೇಲೆ ಒತ್ತಡ ಹೇರಿದ್ದಾರೆ. ಅಲ್ಲದೇ ಆ ಇನ್ಸ್ ಪೆಕ್ಟರ್ ನನ್ನ ಮಗನ ತಂಟೆಗೆ ಬಂದಿದ್ದಾನೆ. ಅವನು ಯಾವುದೇ ಕಾರಣಕ್ಕೂ ಚನ್ನರಾಯಪಟ್ಟಣ ಠಾಣೆಗೆ ಕಾಲಿಡುವಂತಿಲ್ಲ, ಅವನು ಎತ್ತಂಗಡಿ ಆಗೋವರೆಗೂ ಚನ್ನರಾಯಪಟ್ಟಣಕ್ಕೆ ಬರುವಂತಿಲ್ಲ ಎಂದು ಇನ್ಸ್ ಪೆಕ್ಟರ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತು ಈಗ ಹಾಸನದಲ್ಲಿ ಹರಿದಾಡುತ್ತಿದೆ.

ಏನಿದು ಪ್ರಕರಣ?
2018ರ ಏಪ್ರಿಲ್ 29 ರಂದು ಸೂರಜ್ ರೇವಣ್ಣ ಚುನಾವಣಾ ಪ್ರಚಾರ ಸಂಬಂಧ ಜಿಲ್ಲಾ ಪಂಚಾಯತ್ ಸದಸ್ಯ ಶ್ರೇಯಸ್ ಎಂ ಪಾಟೀಲ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಶ್ರೇಯಸ್ ರವರು ಚನ್ನರಾಯಪಟ್ಟಣದಲ್ಲಿ ದೂರು ದಾಖಲಿಸಿದ್ದರು. ಹರೀಶ್ ರವರು ದೂರು ದಾಖಲಿಸಿ, ಸೂರಜ್ ರೇವಣ್ಣರನ್ನು ಆರೋಪಿ ಎ-1 ಒನ್ ಆಗಿ ಉಲ್ಲೇಖಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

Comments are closed.