ಕರ್ನಾಟಕ

ಕಾಲೇಜು ವಿದ್ಯಾರ್ಥಿನಿಯರಲ್ಲಿ ವಸೂಲಿ ಮಾಡಬೇಡಿ; ಪೊಲೀಸರಿಗೆ ದೇವೇಗೌಡ ಮನವಿ

Pinterest LinkedIn Tumblr


ಮೈಸೂರು: ಕಾಲೇಜು ಹುಡುಗಿಯರನ್ನು ಹಿಡಿದು ನಿಲ್ಲಿಸಬೇಡಿ, ಅವರ ಬಳಿ ವಸೂಲಿ ಮಾಡಬೇಡಿ. ಪಾಪಾ, ಅವರ ಬಳಿ ಎಲ್ಲಿ ದುಡ್ಡಿರುತ್ತೆ. ಅವರನ್ನು ಹಿಡಿದು ನಿಲ್ಲಿಸಿ ಯಾಕೆ ತೊಂದರೆ ಕೊಡುತ್ತಿದ್ದೀರಾ? ಈ ರೀತಿ ಹುಡುಗಿಯರಿಗೆ ತೊಂದರೆ ಕೊಡಬೇಡಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪೊಲೀಸರಿಗೆ ವಿಚಿತ್ರವಾಗಿ ಮನವಿ ಮಾಡಿದ್ದಾರೆ.

ಮೈಸೂರಿನ ಗಂಗೋತ್ರಿಯ ಸೆನೆಟ್​ ಭವನದಲ್ಲಿ ನಡೆಯುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ವಿಚಾರ ವಿನಿಮಯ ಸಭೆಯಲ್ಲಿ ಯುವತಿಯರು ಹೆಲ್ಮೆಟ್ ತಪಾಸಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಪೊಲೀಸರಿಗೆ ವಿಚಿತ್ರವಾಗಿ‌ ಮನವಿ‌ ಮಾಡಿಕೊಂಡಿದ್ದಾರೆ. ಕಾಲೇಜು ಹುಡುಗಿಯರ ಬಳಿ ವಸೂಲಿ ಮಾಡಬೇಡಿ ಎಂದು ಹೇಳಿದ ಅವರು, ಪೊಲೀಸರು ಸಭ್ಯತೆಯಿಂದ ವರ್ತನೆ ಮಾಡಿ ಎಂದು ಗದರಿದ್ದಾರೆ. ಸಭೆಯಲ್ಲಿ ಕುಳಿತಿದ್ದ ಸಂಚಾರಿ ಡಿಸಿಪಿ ವಿಕ್ರಮ್ ಅಮಾಟೆಗೆ ಸೂಚನೆ ನೀಡಿದ್ದಾರೆ. ಸಚಿವರು ಸೂಚನೆ ನೀಡುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತ್ತು.

ಭ್ರಷ್ಟಾಚಾರದಲ್ಲೂ ಪ್ರಾಮಾಣಿಕತೆ ತೋರಿದ ಪಿಡಿಓಗಳು

ಯಾರು ಹಣ ತೆಗೆದುಕೊಳ್ಳದೆ ಕೆಲಸ‌ ಮಾಡುತ್ತೀರಿ? ಎಂದು‌ ಸಚಿವರು ಕೇಳಿದ ಪ್ರಶ್ನೆಗೆ ಇಬ್ಬರು ಮಹಿಳಾ ಪಿಡಿಓಗಳು ಕೈ ಎತ್ತಿ ನಾವು ಪ್ರಾಮಾಣಿಕರು ಎಂದು ಪ್ರಾಮಾಣಿಕತೆ ತೋರಿದ್ದಾರೆ. ‌ಕೇವಲ ಇಬ್ಬರು ಪಿಡಿಓಗಳಿಂದ ಉತ್ತರ ಬಂದಿದ್ದು, ಉಳಿದೆಲ್ಲ ಪಿಡಿಓಗಳು ಸಚಿವರ ಪ್ರಶ್ನೆಗೆ ಉತ್ತರ ನೀಡದೆ‌ ಮೌನಕ್ಕೆ ಶರಣಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಸಚಿವರು ಮೈಸೂರಿನಲ್ಲಿ ಒಳ್ಳೆಯ ಆದಾಯ ಇದೆ ವ್ಯಂಗ್ಯ ಮಾಡಿದರು.

ಮೊನ್ನೆಯಷ್ಟೆ ಚಾಮುಂಡೇಶ್ವರಿ ಕ್ಷೇತ್ರದ ಕೃತಜ್ಞತಾ ಸಮಾರಂಭದಲ್ಲಿ ಪಿಡಿಓಗಳನ್ನು ಸಚಿವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇಂದು ಪಿಡಿಓಗಳ ನೈತಿಕತೆ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಮುಂದೆ ಪಿಡಿಓಗಳನ್ನ ಪೇಚಿಗೆ ಸಿಲುಕಿಸಿದ್ದಾರೆ. ಪಿಡಿಓಗಳ ಸಚಿವರ ಪ್ರಶ್ನೆಗೆ ಉತ್ತರಿಸದೆ ನಾವೂ ಭ್ರಷ್ಟರು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

Comments are closed.