ಕರ್ನಾಟಕ

ನೀವು ಅತ್ತರೆ ನಮಗೂ ಅಳು ಬರುtತ್ತದೆ: ಕುಮಾರಸ್ವಾಮಿಗೆ ಹಾಸನ ಬಾಲಕಿ

Pinterest LinkedIn Tumblr


ಹಾಸನ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕಿರುವುದು ರಾಜ್ಯಾದ್ಯಂತ ಸುದ್ದಿಯಾಗಿರುವುದು ಗೊತ್ತೇ ಇದೆ. ಕಾಂಗ್ರೆಸ್ ನಾಯಕರು, ಪ್ರತಿಪಕ್ಷ ಬಿಜೆಪಿಯವರು ಸೇರಿದಂತೆ ಸಾಮಾನ್ಯ ಜನರು ಕೂಡ ಮುಖ್ಯಮಂತ್ರಿಗಳ ಕಣ್ಣೀರಿಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಹಾಸನ ಜಿಲ್ಲೆಯ ಬಾಲಕಿಯೊಬ್ಬಳು, ಮುಖ್ಯಮಂತ್ರಿಗಳೇ ನೀವು ಏಕೆ ಅಳುತ್ತಿದ್ದೀರಿ, ನೀವು ಅಳಬೇಡಿ, ನೀವು ಅತ್ತರೆ ನಮಗೂ ಅಳು ಬರುತ್ತದೆ, ನಾವಿಲ್ಲಿ ಹಳ್ಳಿಯಲ್ಲಿ ಚೆನ್ನಾಗಿದ್ದೇವೆ. ನೀವು ಸಿಟಿ ಬಿಟ್ಟು ಹಳ್ಳಿಗೆ ಬನ್ನಿ, ನಿಮ್ಮ ಜೊತೆ ನಾವು ಇದ್ದೇವೆ ಎಂದು ಧೈರ್ಯ ತುಂಬಿದ್ದಾಳೆ. ಆಕೆ ಮಾತನಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದ ಬಾಲಕಿ ಅರುಂಧತಿ, ವಿಡಿಯೋದಲ್ಲಿ ತಮ್ಮ ಗ್ರಾಮಕ್ಕೆ ಬರುವಂತೆ ಸಿಎಂಗೆ ಆಹ್ವಾನ ನೀಡಿದ್ದಾಳೆ. ಕರ್ನಾಟಕ ಸಿಎಂ ಆಗಿ ನೀವು ಅಧಿಕಾರ ವಹಿಸಿಕೊಂಡ ಬಳಿಕ ಉತ್ತಮ ಮಳೆಯಾಗಿದ್ದು, ನಮ್ಮ ಗ್ರಾಮದಲ್ಲೂ ಉತ್ತಮ ಬೆಳೆಯಾಗಿದೆ. ನಾನು ಹುಟ್ಟಿದ ಸಂದರ್ಭದಲ್ಲಿ ನಮ್ಮ ಗ್ರಾಮದ ಕೆರೆ ತುಂಬಿತ್ತು. ಮತ್ತೆ ಸರಿಯಾಗಿ ಮಳೆ, ಬೆಳೆಯಾಗಿರಲಿಲ್ಲ. ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕೆರೆ ತುಂಬಿದೆ. ನಿಮಗೆ ಅಧಿಕಾರ ಕೊಟ್ಟಿರುವುದು ನಾವು, ಕನ್ನಡಿಗರು, ನಿಮ್ಮ ಪರ ಹೋರಾಟ ಮಾಡಲು ಕರ್ನಾಟಕ ರೈತ ಮಕ್ಕಳು ಜೊತೆಗಿರುತ್ತಾರೆ ಎಂದು ಮುಖ್ಯಮಂತ್ರಿಗಳಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾಳೆ.
ಈ ವೇಳೆ ರೈತರ ಸಾಲಮನ್ನಾ ವಿಷಯವನ್ನು ಕೂಡ ಪ್ರಸ್ತಾಪಿಸಿರುವ ಬಾಲಕಿ, ಕರ್ನಾಟಕದ ಹಲವು ಅಣೆಕಟ್ಟುಗಳು ತುಂಬಿದ್ದು, ಉತ್ತಮ ಬೆಳೆ ಆಗುವ ನಿರೀಕ್ಷೆ ಇದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ನಿಮ್ಮ ಸಾಲಮನ್ನಾ ನಮಗೆ ಬೇಡ, ನಮ್ಮ ಕುಟುಂಬ ತುಂಬ ಚೆನ್ನಾಗಿದೆ. ನೀವು ಚೆನ್ನಾಗಿ, ಆರೋಗ್ಯವಾಗಿರಬೇಕು. ನೀವು ಹೆದರಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ನೀವು ಹೆಚ್ಚು ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ. ನಗರದಲ್ಲಿ ಉತ್ತಮ ವಾತಾವರಣ ಸಿಗುವುದಿಲ್ಲ. ಹಚ್ಚ ಹಸಿರು, ಸಮೃದ್ಧವಾಗಿರುವ ಹಳ್ಳಿಗೆ ಬಂದರೆ ಒಳ್ಳೆಯ ವಾತಾವರಣ ನಿಮಗೆ ಸಿಗುತ್ತದೆ ಎಂದು ಬಾಲಕಿ ಹೇಳಿರುವ ವಿಡಿಯೊವನ್ನು ಅಪ್ ಲೋಡ್ ಮಾಡಲಾಗಿದೆ.
ಕಳೆದ ವಾರ ಕೊಡಗು ಜಿಲ್ಲೆಯ ಸಮಸ್ಯೆಗಳ ಕುರಿತು ವಿಡಿಯೊ ಮಾಡಿ ಬೆಳಕು ಚೆಲ್ಲಿದ್ದ ಬಾಲಕ ಸಿಎಂ ಕುಮಾರಸ್ವಾಮಿ ಅವರ ಗಮನಸೆಳೆದಿದ್ದ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಬಾಲಕಿ ಅರುಂಧತಿ, ಕುಮಾರಸ್ವಾಮಿಯವರು ಇತ್ತೀಚೆಗಷ್ಟೆ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಅದು ಮಾಡಿಲ್ಲ, ಇದು ಮಾಡಿಲ್ಲ, ಯಾವ ಕೆಲಸವೂ ಮಾಡಿಲ್ಲ ಎಂದು ಆರೋಪಿಸುವ ಬದಲು ಅವರಿಗೆ ಸ್ವಲ್ಪ ಟೈಂ ಕೊಡೋಣ ಎಂದಿದ್ದಾಳೆ.

Comments are closed.