ಕರ್ನಾಟಕ

ಕನ್ನಡಪರ ಹೋರಾಟಗಾರರು, ಸಾಹಿತಿಗಳ ಕುರಿತು ಲಘುವಾದ ಹೇಳಿಕೆ: ಕ್ಷಮೆ ಕೇಳಿದ ಕಿರಣ್‌ ಮಜುಂದಾರ್‌

Pinterest LinkedIn Tumblr

ಬೆಂಗಳೂರು : ಕನ್ನಡಪರ ಹೋರಾಟಗಾರರು ಮತ್ತು ಸಾಹಿತಿಗಳ ಕುರಿತು ಲಘುವಾಗಿ ಮಾತನಾಡಿ ಟೀಕೆಗೊಳಗಾಗಿದ್ದ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಅವರು ಕನ್ನಡಿಗರಲ್ಲಿ ಕ್ಷಮೆ ಕೋರಿದ್ದಾರೆ.

ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿರುವ ಅವರು, ”ಕರ್ನಾಟಕ, ಕನ್ನಡ, ಕನ್ನಡಪರ ಸಂಘಟನೆಗಳು, ಹೋರಾಟಗಾರರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಸಾಹಿತಿಗಳ ಮೇಲೆ ನನಗೆ ಅಪಾರ ಗೌರವವಿದೆ. ನಿಮ್ಮ ಭಾವನೆಗಳನ್ನು ನೋಯಿಸುವ ಉದ್ದೇಶ ನನಗಿಲ್ಲ. ಸಾಮಾಜಿಕ ಜವಾಬ್ದಾರಿಯಿಂದ ಕನ್ನಡದ ಮೇಲಿನ ಗೌರವ ಹಾಗೂ ಪ್ರೀತಿಯನ್ನು ಹಂಚಿಕೊಂಡಿದ್ದೇನೆಯೇ ಹೊರತು, ತೆರಿಗೆ ವಿನಾಯಿತಿಗಾಗಿ ಈ ರೀತಿ ಹೇಳಿಕೆ ನೀಡಿಲ್ಲ,”ಎಂದು ಸ್ಪಷ್ಟಪಡಿಸಿದ್ದಾರೆ.

”ನಾನು ಮಾಡಿದ ಟ್ವೀಟ್‌ನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಮಟ್ಟಕ್ಕೆ ಬೆಳೆದಿರುವ ನನಗೆ ಸಾಮಾನ್ಯರ ಜೀವನದ ಕಷ್ಟ ಸುಖಗಳ ಅರಿವಿದೆ. ನನ್ನ ಸಾಮಾಜಿಕ ಕಳಕಳಿಯ ಹಿಂದಿನ ಉದ್ದೇಶವನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಬೇಡ. ಕನ್ನಡದ ಯುವಜನತೆ ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚು ಅವಕಾಶ ಗಳಿಸಬೇಕಾದರೆ ಕನ್ನಡದಷ್ಟೇ ಇಂಗ್ಲೀಷ್‌ ಕೂಡ ಅತ್ಯಗತ್ಯ. ಒಟ್ಟಾರೆ ಕನ್ನಡ ಭಾಷೆ, ಇಲ್ಲಿನ ಜನರನ್ನೂ ಶ್ರೀಮಂತಗೊಳಿಸಬೇಕು. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷ ಮೆ ಕೋರುತ್ತೇನೆ,” ಎಂದು ಹೇಳಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿಸುವ ಸರಕಾರದ ಪ್ರಸ್ತಾವನೆ ವಿರೋಧಿಸಿದ್ದ ಕನ್ನಡಪರ ಹೋರಾಟಗಾರರ ನಿಲುವಿಗೆ ಕುರಿತು ಕಿರಣ್‌ ಮಜುಂದಾರ್‌ ಆಕ್ಷೇಪಿಸಿದ್ದರು. ಅವರ ಟ್ವೀಟ್‌ ಹೇಳಿಕೆ ಖಂಡಿಸಿ ಕನ್ನಡಪರ ಹೋರಾಟಗಾರರು, ಬಯೋಕಾನ್‌ ಕಾರ್ಖಾನೆಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದರು.

Comments are closed.