ಕರ್ನಾಟಕ

ಬೆಂಗಳೂರಿನ ವಿದ್ಯಾರ್ಥಿಗೆ 1 ಕೋಟಿ ರು. ಸಂಬಳ

Pinterest LinkedIn Tumblr

ನವದೆಹಲಿ: ಭಾರತೀಯ ವಿದ್ಯಾರ್ಥಿಗಳ ಬುದ್ಧಿಮತ್ತೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ- ಬಿ)ಯ ವಿದ್ಯಾರ್ಥಿಗೆ ಜಗದ್ವಿಖ್ಯಾತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್, ವಾರ್ಷಿಕ 1.2 ಕೋಟಿ ರು. ಮೊತ್ತದ ವೇತನ ಪ್ಯಾಕೇಜ್ ಆಫರ್ ನೀಡಿದೆ.

ಎಂಟೆಕ್ ವಿದ್ಯಾರ್ಥಿ ಆದಿತ್ಯ ಪಲಿವಾಲ್ ಈ ಭರ್ಜರಿ ಆಫರ್ ಪಡೆದ ವಿದ್ಯಾರ್ಥಿ. ಭಾನುವಾರವಷ್ಟೇ ಆದಿತ್ಯ ಎಂಟೆಕ್ ಪದವಿ ಪಡೆದಿದ್ದು, ಜುಲೈ 16 ರಿಂದ ಗೂಗಲ್ ನಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಲಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ಗೂಗಲ್‌ನ ಕೃತಕ ಬುದ್ಧಿಮತ್ತೆ ಸಂಶೋಧನಾ ವಿಭಾಗದಲ್ಲಿ ಆದಿತ್ಯ ಆರಂಭದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಕೆಲ ತಿಂಗಳ ಹಿಂದೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಂಶೋಧನೆಗೆ ಸಂಬಂಧಿಸಿ ಗೂಗಲ್ ನಡೆಸಿದ್ದ ಪರೀಕ್ಷೆಯಲ್ಲಿ ಆದಿತ್ಯ ಗಮನ ಸೆಳೆದಿದ್ದರು. ಜಗತ್ತಿನಾದ್ಯಂತ ಸ್ಪರ್ಧಿಸಿದ್ದ 6000 ವಿದ್ಯಾರ್ಥಿಗಳಲ್ಲಿ ಆಯ್ಕೆಯಾಗಿರುವ 50 ವಿದ್ಯಾರ್ಥಿಗಳಲ್ಲಿ ಆದಿತ್ಯ ಕೂಡ ಒಬ್ಬರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಬುದ್ಧಿಮತ್ತೆ ಪರಿಗಣಿಸಿ ಗೂಗಲ್ ಭರ್ಜರಿ ಮೊತ್ತಕ್ಕೆ ಆದಿತ್ಯ ಅವರನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ. ಮುಂಬೈ ಮೂಲದ ಆದಿತ್ಯ ಬೆಂಗಳೂರಿನಲ್ಲಿ ಐದು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ.

Comments are closed.