ಕರ್ನಾಟಕ

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎದುರಾದ ಸಂಕಷ್ಟ

Pinterest LinkedIn Tumblr

ಹೂವಿನಹಡಗಲಿ: ಮೈತ್ರಿ ಸರ್ಕಾರ ಬಜೆಟ್‌ ಮಂಡನೆಯಲ್ಲಿ ಕೈಗೊಂಡಿದ್ದ ಸಾಲ ಮನ್ನಾ ತಾರತಮ್ಯ ಪ್ರಶ್ನಿಸಿ ಸುಸ್ತಿ ರಹಿತ ಸಾಲಗಾರ ರೈತರು ನ್ಯಾಯಾಲಯ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.

ಈ ಕುರಿತು ತಾಲೂಕಿನ ಹಿರೇಹಡಗಲಿ ಗ್ರಾಮದ ನೂರಾರು ರೈತರು ಶುಕ್ರವಾರ ಸಭೆ ಮಾಡಿ ಚರ್ಚಿಸಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತರಾದ ಗುಂಡಿ ಚರಣರಾಜ ಮತ್ತು ಹಲಗೇರಿ ಸೋಮಶೇಖರ, ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ಓಟ್‌ ಬ್ಯಾಂಕ್‌ ಗಿಟ್ಟಿಸಿಕೊಳ್ಳಲು ಷರತ್ತು ರಹಿತವಾಗಿ ರಾಜ್ಯ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈಗ ಅಧಿಕಾರ ಉಳಿಸಿಕೊಳ್ಳಲು ಹಾಗೂ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇವಲ ಸುಸ್ತಿ ಬಾಕಿ ಇರುವ 2 ಲಕ್ಷ ರು.ಗಳ ವರೆಗಿನ ಬೆಳೆ ಸಾಲ ಮನ್ನಾ ಮಾಡಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಇದರಿಂದ ಪ್ರಾಮಾಣಿಕವಾಗಿ ಸಾಲ ಪಾವತಿ ಮಾಡಿರುವ ರೈತರಿಗೆ ಅನ್ಯಾಯ ಮಾಡಿದ್ದಾರೆ. ಅತ್ತ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳ ಅ​ಧಿಕಾರಿಗಳು ಸಾಲ ಮರು ಪಾವತಿಸುವಂತೆ ರೈತರ ಮನೆ ಬಾಗಿಲಿಗೆ ಬರುತ್ತಿದ್ದರು. ಅವಧಿ​ ಮೀರಿದರೆ ಶೇ.14ರ ದರದಲ್ಲಿ ಬಡ್ಡಿ ಪಾವತಿಸುವ ಬೆದರಿಕೆಯನ್ನೂ ಹಾಕುತ್ತಿದ್ದರು. ಹೀಗಾಗಿ ರೈತರು ಅನಿವಾರ್ಯವಾಗಿ ತಮ್ಮ ಸಾಲವನ್ನು ಮರು ಪಾವತಿಸಿದ್ದಾರೆ. ಸಾಲ ಕಟ್ಟಿದ್ದೇ ನಮಗೆ ಮುಳುವಾಯಿತು ಎಂದು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಎಲ್ಲ ರೈತರ ಸಾಲವನ್ನು ಷರತ್ತು ರಹಿತವಾಗಿ ಮನ್ನಾ ಮಾಡಬೇಕು. ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವ ನಿರ್ಧಾರ ಕೈಗೊಂಡಿದ್ದೇವೆಂದು ಹೇಳಿದರು.

Comments are closed.