ಕರ್ನಾಟಕ

ಫುಟ್ಬಾಲ್ ತಂಡವನ್ನೇ ಬಂಧಿಸಿಟ್ಟುಕೊಂಡಿರುವ ಆ ಗುಹೆಯಲ್ಲಿ ಏನಿದೆ?

Pinterest LinkedIn Tumblr


ಬೆಂಗಳೂರು: ಆಕರ್ಷಕ ಪ್ರವಾಸೀ ತಾಣಗಳಿಗೆ ಖ್ಯಾತವಾಗಿರುವ ಥಾಯ್ಲೆಂಡ್ ಈಗ ಬೇರೊಂದು ಕಾರಣಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ. ಜೂನ್ 23ರಂದು ಥಾಯ್ಲೆಂಡ್​ನ ಚಿಯಾಂಗ್ ರಾಯ್ ಪ್ರಾಂತ್ಯದ ಗುಹೆಗಳಲ್ಲಿ ಕಿರಿಯರ ಫುಟ್ಬಾಲ್ ತಂಡದ 13 ಜನರು ಸಿಕ್ಕಿಕೊಂಡು ಕೆಲವು ವಾರವಾದರೂ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಇಡೀ ಪ್ರಪಂಚವೇ ಈ ಗುಹೆಯತ್ತ ಕಣ್ಣಿಟ್ಟಿದೆ. ಆದರೂ ಹುಡುಗರನ್ನು ಬಚಾವ್ ಮಾಡುವ ದಾರಿ ದುರ್ಗಮವಾಗಿಯೇ ಇದೆ. ಇವರ ರಕ್ಷಣಾ ಕಾರ್ಯಾಚರಣೆ ವೇಳೆ ನೇವಿ ಸೀಲ್ ತಂಡದ ಒಬ್ಬ ಡೈವರ್ ಬಲಿಯಾಗಿಯೇ ಹೋದ್ರು. ಆದರೂ ರಕ್ಷಣಾ ಕಾರ್ಯದ ತೀವ್ರತೆ ಕಡಿಮೆಯಾಗಿಲ್ಲ, ರಕ್ಷಣೆಯೂ ಸಾಧ್ಯವಾಗುತ್ತಿಲ್ಲ. 12 ಯುವ ಆಟಗಾರರು ಮತ್ತು ತಂಡದ ಕೋಚ್ ಸೇರಿ 13 ಮಂದಿಯ ಪ್ರಾಣ ರಕ್ಷಣೆಗೆ ತಂಡೋಪಾದಿಯಲ್ಲಿ ಜನರು ಗುಹೆಗೆ ಲಗ್ಗೆ ಇಟ್ಟಿದ್ದಾರೆ. ಇಸ್ರೇಲ್, ರಷ್ಯಾ, ಅಮೆರಿಕ ಮೊದಲಾದ ರಾಷ್ಟ್ರಗಳಿಂದ ಪರಿಣಿತ ರಕ್ಷಣಾ ಕಾರ್ಯಕರ್ತರು ಅಖಾಡಕ್ಕಿಳಿದಿದ್ದಾರೆ. ಥಾಯ್ಲೆಂಡ್​ನಾದ್ಯಂತ ಜನರು ಬುದ್ಧನ ಪ್ರಾರ್ಥನೆ ಮಾಡುತ್ತಿದ್ಧಾರೆ. 13 ಮಂದಿಯನ್ನು ಜೀವಂತವಾಗಿಡಲು ಆಹಾರದ ಸರಬರಾಜು ಮಾಡಲಾಗುತ್ತಿದೆ. ಎಳೆಯ ಫುಟ್ಬಾಲ್ ಆಟಗಾರರಿಗೆ ಸ್ಫೂರ್ತಿ ತುಂಬಲು ಫೀಫಾ ಅಧ್ಯಕ್ಷರು ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗೆ ಫ್ರೀ ಟಿಕೆಟ್ ಕೊಡುವುದಾಗಿ ಭರವಸೆ ಕೊಟ್ಟು ಸಂದೇಶ ಕಳುಹಿಸಿದ್ದಾರೆ. ಆದರೂ ಈ 13 ಮಂದಿಯ ರಕ್ಷಣೆ ಕಷ್ಟ ಕಷ್ಟ.

ಏನಿದು ಘಟನೆ?
ಚಿಯಾಂಗ್ ರಾಯ್ ಪ್ರಾಂತ್ಯದ ವೈಲ್ಡ್ ಬೋರ್ಸ್ ಎಂಬ ಸ್ಥಳೀಯ ಕಿರಿಯರ ಫುಟ್ಬಾಲ್ ತಂಡದ 12 ಆಟಗಾರರು ಮತ್ತು ಕೋಚ್ ಜೂನ್ 23ರಿಂದ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿತು. 25 ವರ್ಷದ ಕೋಚ್ ಮತ್ತು 11-16 ವರ್ಷ ವಯಸ್ಸಿನ ಆಟಗಾರರು ಡೋಯ್ ನಾಂಗ್ ನೋನ್ ಪರ್ವತ ಶ್ರೇಣಿಯ ಥಾಮ್ ನುವಾಂಗ್ ನಾಂಗ್ ನೋನ್ ಎಂಬ ಗುಹೆ ವೀಕ್ಷಣೆಗೆ ಹೋಗಿದ್ದವರು ಹೊರಗೆ ಬರಲೇ ಇಲ್ಲ. ಜೂನ್ 23ರಂದು ಗುಹೆಯ ಎಂಟ್ರೆನ್ಸ್​ನಲ್ಲಿ ಇವರ ಸೈಕಲ್ ಮೊದಲಾದ ಸಾಮಾನುಗಳಿರುವುದು ನೋಡಿದ ಮೇಲೆ ಇವರು ಗುಹೆಯೊಳಗೆ ಸಿಲುಕಿರುವುದು ಗೊತ್ತಾಗಿದೆ. ಬಹಳ ಹಳೆಯ ಹಾಗೂ ಬಹಳ ಸಂಕೀರ್ಣವಾಗಿರುವ ಈ ಗುಹೆಯೊಳಗೆ ಹುಡುಗರ ಕಥೆ ಏನಾಗಿರಬಹುದೆಂದು ಯಾರಿಗೂ ಅಂದಾಜು ಇರಲಿಲ್ಲ. ಮಳೆಗಾಲವಾದ್ದರಿಂದ ಗುಹೆಯೊಳಗೆ ನೀರಿನ ಪ್ರವಾಹ ಇರುತ್ತದೆ. ಹೀಗಾಗಿ ಇವರು ಸತ್ತಿರಬಹುದೆಂದು ಎಲ್ಲರೂ ಭಾವಿಸಿದ್ದರು. ಆದರೆ, ಜುಲೈ 2ರಂದು ಸ್ಟಾಂಟೋನ್ ಮತ್ತು ವೋಲಂಥೇನ್ ಎಂಬಿಬ್ಬರು ಡೈವರ್​ಗಳ ಕಣ್ಣಿಗೆ ಈ ಫುಟ್ಬಾಲ್ ತಂಡ ಬೀಳುತ್ತದೆ. ಗುಹೆಯಲ್ಲಿ ಸೂಚನಾ ಫಲಕಗಳನ್ನು ಹಾಕುವ ಸಲುವಾಗಿ ಒಳಗೆ ಹೋಗಿದ್ದ ವೋಲಂಥೇನ್​ಗೆ ಆಕಸ್ಮಿಕವಾಗಿ ಈ 13 ಮಂದಿ ಸಿಕ್ಕಿದ್ದಾರೆ. ಅವರನ್ನು ಮಾತನಾಡಿಸಿ, ಸಮಾಧಾನ ಮಾಡಿ, ರಕ್ಷಣೆಯ ಭರವಸೆ ನೀಡಿ ಅದರ ವಿಡಿಯೋ ರೆಕಾರ್ಡ್ ಮಾಡಿಕೊಂಡು ವೋಲಂಥೇನ್ ಹೊರಗೆ ಬಂದಿದ್ದಾರೆ. ವೈಲ್ಡ್ ಬೋರ್ಸ್ ತಂಡದ ಸದಸ್ಯರು ಸುರಕ್ಷಿತವಾಗಿರುವ ವಿಚಾರವನ್ನು ವಿಡಿಯೋ ಸಮೇತ ಇವರು ಹೊರಹಾಕಿದ್ದಾರೆ. ಸತ್ತೇ ಹೋದರು ಎಂದು ಭಾವಿಸಿದ್ದವರು ಬದುಕಿದ್ದಾರೆಂಬ ವಿಚಾರ ತಿಳಿದು ಇಡೀ ದೇಶ ಪುಟಿದೆದ್ದು ನಿಂತಿತು. ರಕ್ಷಣಾ ಕಾರ್ಯಕರ್ತನೊಬ್ಬ ಈ 13 ಮಂದಿ ಇರುವ ಸ್​ಥಳಕ್ಕೆ ಹೋಗಿ ಬರುತ್ತಾನೆ ಎಂದರೆ, ಆ ಹುಡುಗರೇಕೆ ಹೊರಗೆ ಬರಲು ಸಾಧ್ಯವಿಲ್ಲ?

ಗುಹೆಯಲ್ಲಿ ಅಂಥದ್ದೇನಿದೆ?
ಚಿಯಾಂಗ್ ಲುವಾಂಗ್ ನಾಂಗ್ ನೋನ್ ಎಂಬ ಗುಹೆ ಥಾಯ್ಲೆಂಡ್​ನ ಅತ್ಯಂತ ಅಪಾಯಕಾರಿ ಮತ್ತು ಸಂಕೀರ್ಣ ಗುಹೆಗಳಲ್ಲೊಂದು. ಮಳೆಗಾಲದಲ್ಲಿ ಇಲ್ಲಿ ಪ್ರವೇಶ ನಿಷಿದ್ಧ. ಹಲವಾರು ಕಿಲೋಮೀಟರ್ ದೂರದವರೆಗೂ ಇರುವ ಗುಹೆಯ ಬಹುಭಾಗದ ದಾರಿ ಬಹಳ ಕಡಿದಾಗಿದೆ. ಒಬ್ಬನೇ ವ್ಯಕ್ತಿ ನುಸುಳಿಕೊಂಡು ಹೋಗಬಹುದಾದಷ್ಟು ಕಡಿದು ದಾರಿ ಕೆಲವೆಡೆ ಇದೆ. ಮಳೆಗಾಲದಲ್ಲಿ ಗುಹೆಯೊಳಗೆ ನೀರು ನುಗ್ಗಿದರೆ ಅಲ್ಲಲ್ಲಿ ನಡುಗಡ್ಡೆಗಳೇ ನಿರ್ಮಾಣವಾಗಿಬಿಡುತ್ತದೆ. ಈ 13 ಜನರು ಇಂಥ ಪುಟ್ಟ ನಡುಗಡ್ಡೆಯಲ್ಲಿ ಸಿಲುಕಿಕೊಂಡುಬಿಟ್ಟಿದ್ದಾರೆ. ಬಹಳ ಉದ್ದದ ಮತ್ತು ಕಡಿದಾದ ಗುಹೆಯಾದ್ದರಿಂದ ಒಳಗೆ ಬೆಳಕಿರುವುದಿಲ್ಲ. ಕತ್ತಲಲ್ಲೇ ತಡಕಾಡಿಕೊಂಡು ಇರಬೇಕಾಗುತ್ತದೆ.

ರಕ್ಷಣೆ ಕಷ್ಟ ಹೇಗೆ?
ಹೊರಗಿನಿಂದ ರಕ್ಷಣಾ ಕಾರ್ಯಕರ್ತರೊಬ್ಬರು ಇವರಿದ್ದ ಸ್ಥಳಕ್ಕೆ ಹೋಗಿ ವಾಪಸ್ ಬರುತ್ತಾರೆಂದರೆ, ಇವರಿಗೇಕೆ ಹೊರಬರಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಸಹಜವೇ. ಇಲ್ಲಿ ಸಮಸ್ಯೆ ಇರುವುದು ಈ ಫುಟ್ಬಾಲ್ ತಂಡದ ಬಹುತೇಕ ಸದಸ್ಯರಿಗೆ ಈಜು ಬರುವುದಿಲ್ಲ. ಗುಹೆ ಬಹಳ ಕಡಿದಾಗಿರುವುದರಿಂದ ಒಬ್ಬೊಬ್ಬರನ್ನು ಜೊತೆಗೆ ಕರೆದುಕೊಂಡು ನೀರಿನೊಳಗೆ ಡೈವ್ ಮಾಡಿಕೊಂಡು ಹೊರಗೆ ಬರುವುದು ತೀರಾ ಅಪಾಯದ ಕೆಲಸ. ಹೀಗಾಗಿ, ಇಂಥ ಸಾಹಸಕ್ಕೆ ಕೈಹಾಕದಿರಲು ನಿರ್ಧರಿಸಲಾಗಿದೆ. ಆದರೂ ಹಲವು ಮಾರ್ಗೋಪಾಯಗಳನ್ನು ಹುಡುಕುವುದು ಮುಂದುವರಿದಿದೆ.

ಅಪಾಯಗಳಿವೆ:
ನಿನ್ನೆ ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ನೇವಿ ಸೀಲ್​ನ ಒಬ್ಬ ಡೈವರ್ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾನೆ. ಇದು ಗುಹೆಯೊಳಗಿರುವ ಅಪಾಯದ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ. ಆ 13 ಜನರೂ ಆಮ್ಲಜನಕದ ಕೊರತೆಯಿಂದಲೇ ಅಸುನೀಗುವ ಅಪಾಯವಿದ್ದೇ ಇದೆ. ರಕ್ಷಣಾ ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗಿ ಗುಹೆಯಲ್ಲಿರುವ ಆಮ್ಲಜನಕ ಇನ್ನೂ ಕಡಿಮೆಯಾಗಿಬಿಡುವ ಸಾಧ್ಯತೆಯೂ ಇದೆ.

ಮಳೆಗಾಲವಾದ್ದರಿಂದ ಇನ್ನೂ ಹಲವು ದಿನಗಳು ಮಳೆ ಸುರಿಯುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ಈ 13 ಜನರು ಇನ್ನೂ ಮೂರು ತಿಂಗಳು ಗುಹೆಯೊಳಗೆಯೇ ಕಾಲ ಕಳೆಯಬೇಕಾಗಬಹುದು. ಮಳೆ ನಿಲ್ಲುವವರೆಗೂ ರಕ್ಷಣಾ ಕಾರ್ಯಾಚರಣೆ ಮಾಡುವುದು ಅಪಾಯಕಾರಿ ಎನಿಸಿದೆ.

ರಕ್ಷಣೆಯಲ್ಲೂ ಅವಾಂತರ:
ಗುಹೆಯಲ್ಲಿ ಸಿಲುಕಿದವರನ್ನು ರಕ್ಷಿಸಲು ತಂಡೋಪಾದಿಯಾಗಿ ಜನರು ಅತಿಯಾದ ಉತ್ಸಾಹ ತೋರುತ್ತಿದ್ಧಾರೆ. ಪರಿಣಿತರ ಜೊತೆ ರಕ್ಷಣಾ ಕಾರ್ಯದ ಅರಿವೇ ಇಲ್ಲದ ಉತ್ಸಾಹಿಗಳೂ ಕೈಜೋಡಿಸಿದ್ದಾರೆ. ಉದಾಹರಣೆಗೆ, ತಜ್ಞರ ಒಂದು ತಂಡವು ಗುಹೆಯೊಳಗಿನಿಂದ ನೀರನ್ನು ಹೊರಹಾಕುತ್ತಿದ್ದರೆ, ಮತ್ತೊಂದು ಕಡೆ ಅನನುಭವಿ ಉತ್ಸಾಹಿಗಳು ನೀರನ್ನು ಮತ್ತೆ ಗುಹೆಯೊಳಗೆ ಕಳುಹಿಸುತ್ತಿದ್ದಾರೆ. ಇವರಿಗೆ ತಾವೇನು ಮಾಡುತ್ತಿದ್ದೇವೆಂಬ ಅರಿವೇ ಇಲ್ಲ. ಕೆಲಸ ಕೆಡಲು ಇದೂ ಕಾರಣವಾಗಿದೆ.

ರಕ್ಷಣೆ ಹೇಗೆ?
ಗುಹೆಯೊಳಗೆ ಇರುವ ನೀರನ್ನು ಹೊರತೆಗೆಯುವ ಕೆಲಸವಾಗುತ್ತಿದೆ. ಒಂದು ಮಟ್ಟದವರೆಗೂ ನೀರನ್ನು ಹೊರಬಸಿದರೆ, ಹುಡುಗರು ನಡೆದುಕೊಂಡು ಹೊರಗೆ ಬರಲು ಅವಕಾಶವಾಗುತ್ತದೆ. ಆದರೆ, ಮಳೆ ಬಂದರೆ ಆ ಸಾಧ್ಯತೆಯೂ ನಶಿಸುತ್ತದೆ. ಇನ್ನು, ತಿಂಗಳುಗಳಿಗಾಗುವಷ್ಟು ಆಹಾರವನ್ನು ಗುಹೆಯೊಳಗೆ ಸರಬರಾಜು ಮಾಡಲಾಗುತ್ತಿದೆ. ಡೈವಿಂಗ್ ಪರಿಣಿತ ವೈದ್ಯರನ್ನು ಕಳುಹಿಸಿ 13 ಮಂದಿಗೆ ಶುಶ್ರೂಷೆ ನೀಡಲಾಗುತ್ತಿದೆ. ಜೊತೆಗೆ, ಗುಹೆಯೊಳಗೆ ಆಮ್ಲಜನಕದ ಬಾಕ್ಸ್​ಗಳನ್ನು ಕಳುಹಿಸುವ ಕೆಲಸವೂ ನಡೆಯುತ್ತಿದೆ. ಆದರೆ, ತೀರಾ ಕಡಿದಾದ ದಾರಿಯಲ್ಲಿ ಒಬ್ಬ ವ್ಯಕ್ತಿಯು ಆಕ್ಸಿಜನ್ ಸಿಲೆಂಡರ್ ಹೊತ್ತೊಯ್ಯುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.

ನೀರಿನ ಮಟ್ಟ ಇಳಿಯದೇ ಹೋದಲ್ಲಿ ಹುಡುಗರು ಮಳೆಗಾಲ ಮುಗಿಯುವವರೆಗೂ ಆ ಗುಹೆಯೊಳಗೆ ಇರುವುದು ಅನಿವಾರ್ಯವಾಗಬಹುದು. ಅಷ್ಟರಲ್ಲಿ ಆ ಹುಡುಗರಿಗೆ ಡೈವಿಂಗ್ ಕಲಿಸಿಕೊಡುವ ಯೋಜನೆ ಇದೆ. ಇನ್ನು, ಪ್ರಪಂಚದ ಅತ್ಯಂತ ವೇಗದ ಸಾರಿಗೆ ವ್ಯವಸ್ಥೆಯಾದ ಹೈಪರ್ ಲೂಪ್ ಯೋಜನೆ ರೂವಾರಿಯಾದ ಇಲಾನ್ ಮಸ್ಕ್ ತಂಡದ ಸದಸ್ಯರು ಥಾಯ್ಲೆಂಡ್​ನ ಈ ಅಪಾಯಕಾರಿ ಗುಹೆಗೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗುವ ನಿರೀಕ್ಷೆ ಇದೆ.

Comments are closed.