
ದೊಡ್ಡಬಳ್ಳಾಪುರ: ಕಂಠಪೂರ್ತಿ ಕುಡಿದು ಪ್ರಜ್ಞೆಯಿಲ್ಲದೆ ಎಲ್ಲೆಂದರಲ್ಲಿ ಬಿದ್ದುಕೊಳ್ಳುವ ಜನರಿಗೆ ಎಚ್ಚರಿಕೆ ನೀಡುವ ಸುದ್ದಿಯೊಂದು ಬಂದಿದೆ. ಮದ್ಯಪಾನ ಮಾಡಿ ಬೀದಿಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬನ ಮೇಲೆ ಸಾವಿರಾರು ಇರುವೆಗಳ ಗುಂಪು ಮುತ್ತಿಕೊಂಡು ಕಚ್ಚಿ ತಿನ್ನಲು ಯತ್ನಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಾನಮತ್ತನಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಈ ಯುವಕನನ್ನು ಜೀವಂತವಾಗಿ ಕಚ್ಚಿ ತಿನ್ನುತ್ತಿದ್ದ ಈ ಭಯಾನಕ ದೃಶ್ಯ ಕಂಡು ಊರಿನ ಜನರು ಬೆಚ್ಚಿಬಿದ್ದಿದ್ದಾರೆ. ಸಕಾಲಕ್ಕೆ ಈ ದೃಶ್ಯ ಜನರ ಕಣ್ಣಿಗೆ ಬಿದ್ದದ್ದರಿಂದ ಕುಡುಕನ ಪ್ರಾಣ ಉಳಿದಿದೆ. ಇರುವೆಗಳ ಕಡಿತಕ್ಕೊಳಗಾದ ಈ ವ್ಯಕ್ತಿಗೆ ಸಣ್ಣಪುಟ್ಟ ಗಾಯವಾಗಿದೆ.
ಈ ಘಟನೆ ನಡೆದ ಬೆನ್ನಲ್ಲೇ ಊರಿನ ಜನರು ತಮ್ಮ ತಾಲೂಕಿಗೆ ಅಂಟಿದ ಮದ್ಯಮಾರಾಟದ ಪಿಡುಗಿಗೆ ಹಿಡಿಶಾಪ ಹಾಕುತ್ತಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ರೇಷನ್ ಅಂಗಡಿಗಳಲ್ಲೇ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಮದ್ಯಪಾನಿಗಳ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಅಕ್ರಮ ಮದ್ಯ ಮಾರಾಟ ಕಣ್ಮುಂದೆಯೇ ನಡೆಯುತ್ತಿದ್ದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲವೆಂದು ತಾಲೂಕಿನ ಹಿರಿಯರು ಅಲತ್ತುಕೊಳ್ಳುತ್ತಿದ್ದಾರೆ. ಕುಡುಕನ ಮೇಲೆ ಇರುವೆಗಳು ದಾಳಿ ಮಾಡಿದ ಘಟನೆಯಿಂದಾದರೂ ಜನರು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮದ್ಯಪಾನದ ಪಿಡುಗನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆಂದು ಆಶಿಸೋಣ.
Comments are closed.