ಕರ್ನಾಟಕ

ಸಾಲಮನ್ನಾ ಪರೋಕ್ಷ ಸುಳಿವು ನೀಡಿದ ರಾಜ್ಯಪಾಲರ ಭಾಷಣ!

Pinterest LinkedIn Tumblr


ಬೆಂಗಳೂರು: ರೈತರ, ಹಿಂದುಳಿದ, ಶೋಷಿತರ, ಮಹಿಳೆಯರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಟಿ ಬದ್ಧವಾಗಿದೆ. ನನ್ನ ಸರ್ಕಾರ ಜನರ ಸಮಸ್ಯೆ ನಿವಾರಣೆಗೆ ಸಿದ್ಧವಾಗಿದೆ ಎಂದು ಮೈತ್ರಿ ಸರ್ಕಾರದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯ್ ವಾಲಾ ಹೇಳಿದರು.

ಸೋಮವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಚಾಲನೆ ನೀಡಿದರು. ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಸಾಲಮನ್ನಾ ಪರೋಕ್ಷ ಸುಳಿವು, ಭಾಷಣದಲ್ಲಿ ಪ್ರಸ್ತಾಪವಿಲ್ಲ:

ಸುಮಾರು 19 ಪುಟಗಳ ಸುದೀರ್ಘ ಭಾಷಣವನ್ನು ರಾಜ್ಯಪಾಲ ವಿಆರ್ ವಾಲಾ ಅವರು ಮಾಡಿದರೂ ಕೂಡಾ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಾಲಮನ್ನಾದ ವಿಚಾರ ಭಾಷಣದಲ್ಲಿ ಪ್ರಸ್ತಾಪ ಆಗಿಲ್ಲ. ಆದರೆ ಪರೋಕ್ಷವಾಗಿ ರೈತರ ಸಾಲಮನ್ನಾದ ಬಗ್ಗೆ ಸುಳಿವು ನೀಡಿದೆ.

ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರೈತರ ಸಮಸ್ಯೆ ನಿವಾರಣೆಗೆ ನನ್ನ ಸರ್ಕಾರ ಬದ್ಧವಾಗಿದೆ. ಅಲ್ಲದೇ ರೈತರು ಇಸ್ರೇಲ್ ಮಾದರಿಯ ಕೃಷಿಯನ್ನು ಅನುಸರಿಸಬೇಕು. ಇದಕ್ಕೆ ಬೇಕಾದ ಪೂರಕ ವಾತಾವರಣವನ್ನು ಸರ್ಕಾರ ಕಲ್ಪಿಸಿಕೊಡಲಿದೆ ಎಂದು ಹೇಳಿದರು.

ಸೈಬರ್ ಕ್ರೈಂ ತಡೆಗೆ ಸೂಕ್ತ ವ್ಯವಸ್ಥೆ ರೂಪಿಸಲಾಗುವುದು. . ಸೈಬರ್ ಅಪರಾಧಿಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಿದ್ಧವಾಗಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕೆ ನಿಯಮ ರೂಪಿಸಲಾಗಿದೆ ಎಂದರು.

ಬಜೆಟ್ ವರೆಗೆ ಕಾಯಿರಿ:

ಸಾಲಮನ್ನಾ ಬಗ್ಗೆ ಬಜೆಟ್ ವರೆಗೆ ಕಾಯಿರಿ. ಬಜೆಟ್ ನ ಯಾವ ಅಂಶವನ್ನೂ ರಾಜ್ಯಪಾಲರ ಭಾಷಣದಲ್ಲಿ ಸೇರಿಸಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜುಲೈ 5ರಂದು ಮಂಡಿಸುವ ಬಜೆಟ್ ನಲ್ಲಿ ಸಾಲಮನ್ನಾ ಬಗ್ಗೆ ಘೋಷಿಸುವುದಾಗಿ ಸ್ಪಷ್ಟಪಡಿಸಿದರು.

ರಾಜ್ಯಪಾಲರ ಭಾಷಣದ ಹೈಲೈಟ್ಸ್:

*ನೀರಾವರಿ ಯೋಜನೆಗಳಿಗೆ ಬೇಕಾದ ಎಲ್ಲಾ ನೆರವು ನೀಡಲಾಗುವುದು

*ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವೂ ಇದೆ

*ಆರೋಗ್ಯ ಕ್ಷೇತ್ರಗಳ ಅಭಿವೃದ್ದಿಗೆ ಸರ್ಕಾರ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ

*ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ

*ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಸಮಗ್ರ ನಿಯಮ ರೂಪಿಸಲಾಗುವುದು

*ಉದ್ಯೋಗ ಸೃಷ್ಠಿಗೆ ರಾಜ್ಯ ಸರ್ಕಾರ ಸೂಕ್ತ ಯೋಜನೆ ರೂಪಿಸಲಿದೆ

*ಹೊಸ, ಹೊಸ ಆವಿಷ್ಕಾರಗಳ ಮೂಲಕ ಹೊಸ ಉದ್ಯೋಗ ಸೃಷ್ಟಿಗೆ ಅನುಕೂಲ ಮಾಡಿಕೊಡಲಾಗುವುದು.

*ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗುವುದು

*ಅಲ್ಪಸಂಖ್ಯಾತ ವಿದ್ಯಾರ್ಥಿಗಳ ನೆರವಿಗೆ ಸ್ಕಾಲರ್ ಶಿಪ್ ಘೋಷಿಸಲಾಗಿದೆ

Comments are closed.