ಕರ್ನಾಟಕ

ಸೊಳ್ಳೆ ಔಷಧ ಸಿಂಪಡಿಸುವಾಗ ಗುತ್ತಿಗೆ ಪೌರಕಾರ್ಮಿಕ ಸಾವು

Pinterest LinkedIn Tumblr


ಬೆಂಗಳೂರು: ಸೊಳ್ಳೆ ಔಷಧ ಸಿಂಪಡಿಸುವಾಗ ಚೆನ್ನಪ್ಪ ಎಂಬ ಗುತ್ತಿಗೆ ಪೌರಕಾರ್ಮಿಕ ಕುಸಿದು ಬಿದ್ದು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಮನೋರಾಯನಪಾಳ್ಯ ವಾರ್ಡ್‌ನಲ್ಲಿ ಸಂಭವಿಸಿದೆ. ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಸೊಳ್ಳೆ ಕಾಟ ಹೆಚ್ಚುತ್ತಿರುವ ಕುರಿತು ಪಾಲಿಕೆಗೆ ಸದಸ್ಯರಿಂದ ದೂರುಗಳು ಕೇಳಿಬಂದಿದ್ದವು.

ಆ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ನಗರದಾದ್ಯಂತ ಸೊಳ್ಳೆ ಔಷಧ ಸಿಂಪಡಣೆ ಮಾಡುವಂತೆ ಸೂಚಿಸಿದ್ದರು. ಅದಂತೆ ಕಳೆದ 20 ದಿನಗಳಿಂದ ಔಷಧ ಸಿಂಪಡಣೆ ಕಾರ್ಯದಲ್ಲಿ ತೊಡಗಿದ್ದ ಚೆನ್ನಪ್ಪ ದಿಢೀರ್‌ ಕುಸಿದುಬಿದ್ದಿದ್ದಾರೆ. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ಚೆನ್ನಪ್ಪ ಕಳೆದ 18 ವರ್ಷಗಳಿಂದ ಪಾಲಿಕೆಯಲ್ಲಿ ಗುತ್ತಿಗೆ ಪೌರಕಾರ್ಮಿಕರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರನ್ನು ಸೊಳ್ಳೆ ಔಷಧ ಸಿಂಪಡಣೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಔಷಧ ಸಿಂಪಡಣೆ ವೇಳೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ತಿಳಿಸದ ಹಿನ್ನೆಲೆಯಲ್ಲಿ ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಮೇಯರ್‌ ಆರ್‌.ಸಂಪತ್‌ರಾಜ್‌, ಸೊಳ್ಳೆ ಔಷಧ ಸಿಂಪಡಣೆ ವೇಳೆ ಹೃದಯಾಘಾತವಾಗಿ ಚೆನ್ನಪ್ಪ ಮೃತಪಟ್ಟಿದ್ದು, ಪಾಲಿಕೆಯಿಂದ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದರು

Comments are closed.