ಕರ್ನಾಟಕ

ಶಾಂತಿವನ ಪ್ರಕೃತಿ ಚಿಕಿತ್ಸಾಯದ ವಿಡಿಯೋ ಕುರಿತು ಮೌನ ಮುರಿದ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಶಾಂತಿವನ ಪ್ರಕೃತಿ ಚಿಕಿತ್ಸಾಯದಲ್ಲಿ ಸಮ್ಮಿಶ್ರ ಸರ್ಕಾರದ ಆಯುಷ್ಯದ ಕುರಿತು ಹೇಳಿಕೆ ನೀಡಿದ್ದ ವಿಡಿಯೋ ಕುರಿತು ಸಮನ್ವಯ ಸಮಿತಿ ಅಧ್ಯಕ್ಷ , ಮಾಜಿ ಸಿಎಂ ಸಿದ್ದರಾಮಯ್ಯ ಮೌನ ಮುರಿದ್ದಿದ್ದು, ‘ವಿಡಿಯೋಗೂ ನನಗೂ ಸಂಬಂಧ ಇಲ್ಲ’ ಎನ್ನುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ‘ನಾನು ಸರ್ಕಾರದ ವಿರುದ್ಧ ಇದ್ದೇನೆ ಎನ್ನುವುದು ಸುಳ್ಳು . ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿದ್ದಾರೆ. ನಾನು ಯಾವ ಸಂದರ್ಭದಲ್ಲಿ ಮಾತನಾಡಿದ್ದೇನೋ ಗೊತ್ತಿಲ್ಲ. ಸಹಜವಾಗಿ ಮಾತನಾಡುವಾಗ ರೆಕಾರ್ಡ್‌ ಮಾಡಿದ್ದಾರೆ’ ಎಂದರು.

‘ಮೈತ್ರಿ ಸರ್ಕಾರ ಸುಗಮವಾಗಿದೆ.ಯಾವುದೇ ಗೊಂದಲವಿಲ್ಲ.ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಸರ್ಕಾರ ರಚಿಸಿದ್ದೇವೆ’ ಎಂದರು.

ರಾಜಕೀಯದಲ್ಲಿ‌ ಇನ್ನಷ್ಟು ಕ್ರಿಯಾಶೀಲವಾಗಿ‌ ತೊಡಗಿಸಿಕೊಳ್ಳುತ್ತೇನೆ !

ಶುಕ್ರವಾರ ಬೆಳಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಿದ್ದರಾಮಯ್ಯ ನಾನು ರಾಜಕೀಯದಲ್ಲಿ ಇನ್ನಷ್ಟು ಸಕ್ರೀಯವಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕಳೆದ ರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದೇನೆ. ಚುನಾವಣಾ ಕಾಲದ ಕಾರ್ಯದೊತ್ತಡದಿಂದ ಬಳಲಿದ್ದ ದೇಹ ಮತ್ತು‌ ಮನಸ್ಸು ಸುಧಾರಿಸಿ ಉಲ್ಲಸಿತನಾಗಿದ್ದೇನೆ ಎಂದು ಮೊದಲ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ‘ಉಜಿರೆಯ‌ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಆರೋಗ್ಯ ಸುಧಾರಣೆ ಮಾಡಿಕೊಂಡ ನಂತರ, ರಾಜಕೀಯದಲ್ಲಿ‌ ಇನ್ನಷ್ಟು ಕ್ರಿಯಾಶೀಲವಾಗಿ‌ ತೊಡಗಿಸಿಕೊಳ್ಳಲು‌ ದೇಹ ಮತ್ತು ಮನಸ್ಸು ಸಜ್ಜಾಗಿದೆ’ ಎಂದು ಬರೆದಿದ್ದಾರೆ.

ಮೂರನೇ ಟ್ವೀಟ್‌ನಲ್ಲಿ ‘ಉಜಿರೆ ಪ್ರಕೃತಿ ಚಿಕಿತ್ಸಾ ಕೇಂದ್ರ ಹನ್ನೆರಡು ದಿನ ನನ್ನ ಮನೆಯಾಗಿತ್ತು ಡಾ. ಪ್ರಶಾಂತ್ ಶೆಟ್ಟಿ ನೇತೃತ್ವದ ವೈದ್ಯರ ತಂಡ‌ ತಮ್ಮ ಕುಟುಂಬದ ಸದಸ್ಯನಂತೆ‌ ನನ್ನ ಪಾಲನೆ ಮಾಡಿದ್ದಾರೆ. ಅವರ ಸೇವಾ ಬದ್ಧತೆ ಮತ್ತು ತೋರಿಸಿದ್ದ ಕಾಳಜಿಗೆ ತುಂಬುಹೃದಯದ ಕೃತಜ್ಞತೆಗಳು. ಎಲ್ಲರಿಗೂ ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಧನ್ಯವಾದ ಸಲ್ಲಿಸಿದ್ದಾರೆ.

Comments are closed.