ಕರ್ನಾಟಕ

ಚಿಕ್ಕಮಗಳೂರು: ಬಿಜೆಪಿ ಮುಖಂಡನ ಹತ್ಯೆ ಖಂಡಿಸಿ ಬಂದ್‌

Pinterest LinkedIn Tumblr


ಚಿಕ್ಕಮಗಳೂರು: ತನ್ನ ಸ್ನೇಹಿತನ ಮನೆಗೆ ಹೋಗಿ ವಾಪಸ್ಸಾಗುತ್ತಿದ್ದ ಬಿಜೆಪಿ ಮುಖಂಡ ಮಹಮದ್‌ ಅನ್ವರ್‌ ಅವರನ್ನು ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದು, ಹತ್ಯೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಶನಿವಾರ ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಮೂರು ಧರ್ಮಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಇದೇ ವೇಳೆ, ಅನ್ವರ್‌ ಅವರ ಗೌರವಾರ್ಥ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಶಾಸಕ ಸಿ.ಟಿ.ರವಿ ಮಾಡಿಕೊಂಡ ಮನವಿಗೆ ಸ್ಪಂದಿಸಿ ನಗರದ ವಿವಿಧೆಡೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಚ್ಚಲಾಗಿತ್ತು. ಹತ್ಯೆಗಾರರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ನಗರದಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು.

ಇದಕ್ಕೂ ಮೊದಲು, ಜಿಲ್ಲಾಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಮದ್‌ ಅನ್ವರ್‌ ಅವರ ಸಹೋದರ ಮಹಮದ್‌ ಕಬೀರ್‌, ಈ ಹತ್ಯೆಗೆ ಹಳೇ ದ್ವೇಷವೇ ಕಾರಣ. ಸುಮಾರು 8 ವರ್ಷಗಳ ಹಿಂದೆ ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ತಮ್ಮ ಸಹೋದರನ ಕೊಲೆಗೆ ಯತ್ನ ನಡೆದಿತ್ತು. ಆಗ ಅನ್ವರ್‌ ಬಚಾವ್‌ ಆದರೂ ಅವರ ಕಾಲು ಕತ್ತರಿಸಲಾಗಿತ್ತು. ಆ ಸಂದರ್ಭದಲ್ಲಿ ಎಸ್‌ಎಸ್‌ಎಫ್‌ ಸಂಘಟನೆಯ ಮುಖಂಡ ಯೂಸುಫ್‌ ಹಾಜಿ, ಆತನ ಪುತ್ರರಾದ ತಯೂಬ್‌, ಮನ್ಸೂರ್‌, ನಗರಸಭೆಯ ಮಾಜಿ ಸದಸ್ಯ ಬದ್ರು ಹಾಗೂ ಆತನ ಪುತ್ರ ಫಾರೂಕ್‌ ವಿರುದ್ಧ ದೂರು ದಾಖಲಿಸಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗಳಿಗೆ ಶಿಕ್ಷೆಯೂ ಆಗಿತ್ತು ಎಂದು ತಿಳಿಸಿದರು.

ಈ ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ಮಹಮದ್‌ ಅನ್ವರ್‌ ಅವರ ಸಹೋದರ ಮಹಮದ್‌ ಕಬೀರ್‌ ನೀಡಿರುವ ದೂರಿನನ್ವಯ ಬಸವನಹಳ್ಳಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆಗೆ 6 ತಂಡ ರಚಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಮಹಮದ್‌ ಅನ್ವರ್‌ ಅವರ ಕೊಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆದಿದಿಯೋ ಅಥವಾ ಅನ್ವರ್‌ ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ಕೊಲೆಯಾಗಿದೆಯೋ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು.
– ಶೋಭಾ ಕರಂದ್ಲಾಜೆ, ಸಂಸದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.

ಕೇರಳ ಹಾಗೂ ಕರಾವಳಿಯಲ್ಲಿ ಕಾಣುತ್ತಿದ್ದ ಹತ್ಯಾ ರಾಜಕಾರಣ ಚಿಕ್ಕಮಗಳೂರಿಗೆ ಕಾಲಿಟ್ಟಿರುವುದು ಬಹಳ ಗಂಭೀರವಾದ ವಿಷಯ. ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಬೇಕು.
– ಸಿ.ಟಿ.ರವಿ, ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.

Comments are closed.