ಅಂತರಾಷ್ಟ್ರೀಯ

ಮಧ್ಯರಾತ್ರಿ ಆಕೆ ಕಾರು ಚಲಾಯಿಸಿದ್ದು ಗಲ್ಪ್ ನ ಯಾವ ರಾಷ್ಟ್ರದಲ್ಲಿ ಗೊತ್ತಾ?

Pinterest LinkedIn Tumblr


ರಿಯಾದ್‌: ಮಧ್ಯರಾತ್ರಿಯಲ್ಲಿ ಕಾರು ಏರಿದ ಸಮರ್‌ ಅಲ್‌ಮೊಗ್ರಿನ್ ಎಂಬ ಹೆಣ್ಣು ಮಗಳು ಸ್ಟೇರಿಂಗ್‌ ಹಿಡಿಯುತ್ತಾರೆ. ಆಕೆಯ ಕಾರು ಚಲಿಸುತ್ತಿದ್ದಂತೆ ದಾರಿಯುದ್ದಕ್ಕೂ ಆಕೆಯನ್ನು ತಡೆದು ನಿಲ್ಲಿಸುವ ಹೆಣ್ಮಕ್ಕಳ ಗುಂಪು ಹೂಗುಚ್ಛ ಕೊಟ್ಟು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಮದುವೆಯಾದ ಹೊಸ ಜೋಡಿಗಳು ಹರ್ಷದಿಂದ ಆಕೆಯತ್ತ ಕೈ ಬೀಸುತ್ತಾರೆ.

ರಿಯಾದ್‌ನಲ್ಲಿ ಹುಟ್ಟಿ ಬೆಳೆದ ಸಮರ್‌ಗೆ ಕೊನೆಗೂ ಕಾರು ಚಲಾಯಿಸುವ ಹಕ್ಕು ದೊರೆತಿದೆ. ಸೌದಿ ಅರೇಬಿಯಾದಲ್ಲಿ ಮಹಿಳೆಯರು ಡ್ರೈವ್‌ ಮಾಡಬಾರದು ಎಂದು ಹೇರಿದ್ದ ನಿಷೇಧದಿಂದ ಬಿಡುಗಡೆಯಾಗಿರುವ ಮಹಿಳೆಯರು ತಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸಂತೋಷದಿಂದ ಆಚರಿಸುತ್ತಿದ್ದಾರೆ. ಈ ಆಚರಣೆಗೆ ಮುನ್ನುಡಿ ಬರೆದದ್ದು ಸಮರ್‌.

ಟಿವಿ ನಿರೂಪಕಿಯಾಗಿರುವ ಸಮರ್‌ 3 ಮಕ್ಕಳ ತಾಯಿ, ಮಧ್ಯರಾತ್ರಿಯಾಗುವುದನ್ನೇ ಕಾಯುತ್ತಿದ್ದ ಸಮರ್‌, ಬಿಳಿ ಬಣ್ಣದ ಅಬಯ (ಬುರ್ಕಾ) ಧರಿಸಿ, ಹೊರಗಡೆ ನಿಲ್ಲಿಸಿದ್ದ ಜಿಎಂಸಿ ಕಾರು ಬಳಿ ಬರುತ್ತಾರೆ. ಅವರಿಗೆ ಆಕೆಯ ಗೆಳತಿ ಸಾಥ್‌ ನೀಡುತ್ತಾರೆ.

ರಿಯಾದ್‌ ಕಾರು ಓಡಿಸಿದ ಮಹಿಳೆ

ಕಾರನ್ನು ರಿಯಾದ್‌ನ ಪ್ರಮುಖ ರಸ್ತೆಯಾಗಿರುವ ಕಿಂಗ್‌ ಫಹಾದ್ ಕಡೆ ತಿರುಗಿಸುತ್ತಾರೆ. ರಸ್ತೆಯಲ್ಲಿ ಆಕೆಗೆ ಅದ್ಭುತ ಸ್ವಾಗತ ಸಿಗುತ್ತದೆ. ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಆಕೆಯತ್ತ ಕೈ ಬೀಸಿ ತಮ್ಮ ಹರ್ಷ ವ್ಯಕ್ತಪಡಿಸುತ್ತಾರೆ.

ಮಹಿಳೆಯರು ಗಾಡಿ ಓಡಿಸಬಹುದೇ? ಎಂಬುವುದರ ಬಗ್ಗೆ ಇತ್ತೀಚೆಗೆ ದೊಡ್ಡ ಚರ್ಚೆಯೇ ನಡೆಯಿತು. 2013ರಲ್ಲಿ ಸೌದಿಯ ಪ್ರಸಿದ್ಧ ಧರ್ಮ ಗುರು ‘ಮಹಿಳೆಯರು ಗಾಡಿ ಓಡಿಸಬಾರದು, ಗಾಡಿ ಓಡಿಸಿದರೆ ಮಕ್ಕಳು ಹುಟ್ಟಲು ತೊಂದರೆಯಾಗುತ್ತದೆ’ ಎಂಬ ಹೇಳಿಕೆ ನೀಡಿದ್ದರು.

ಇದೀಗ ಎಲ್ಲ ಕಟ್ಟಳೆ ಮೀರಿ ಅಲ್ಲಿಯ ಮಹಿಳೆಯರಿಗೆ ಗಾಡಿ ಓಡಿಸುವ ಸ್ವಾತಂತ್ರ್ಯ ಸಿಕ್ಕಿರುವುದರಿಂದ, ಅಲ್ಲಿಯ ಮಹಿಳೆಯರಿಗೆ ತಾಜಾ ಗಾಳಿ ಉಸಿರಾಡುತ್ತಿರುವ ಅನುಭವ ಉಂಟಾಗಿದೆ.

Comments are closed.