ರಾಷ್ಟ್ರೀಯ

ಕಾಣೆಯಾಗಿದ್ದ ಮೆಸ್ಸಿ ಅಭಿಮಾನಿ ಶವವಾಗಿ ಪತ್ತೆ

Pinterest LinkedIn Tumblr


ಕೊಟ್ಟಾಯಂ: ‘ಇನ್ನು ಈ ಜಗತ್ತಿನಲ್ಲಿ ನನಗೇನೂ ನೋಡಲು ಉಳಿದಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಮಲೆಯಾಳಂ ಭಾಷೆಯಲ್ಲಿ ಬರೆದಿಟ್ಟು ಮನೆಬಿಟ್ಟು ಹೋಗಿದ್ದ ಡಿನ್ ಅಲೆಕ್ಸ್​ ಶವ ಇಂದು ನದಿಯಲ್ಲಿ ಪತ್ತೆಯಾಗಿದೆ.

ಫುಟ್​ಬಾಲ್​ ಆಟಗಾರ ಲಿಯೋನಲ್ ಮೆಸ್ಸಿಯ ಮಹಾ ಅಭಿಮಾನಿಯಾಗಿದ್ದ 30 ವರ್ಷದ ಡಿನು ಅಲೆಕ್ಸ್​ ಕೇರಳದ ಕೊಟ್ಟಾಯಂ ಜಿಲ್ಲೆಯ ಅರುಮಾನೂರ್​ ಅಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಮೆಸ್ಸಿಯ ಅರ್ಜೆಂಟೈನಾ ತಂಡ ಕ್ರೋಷಿಯ ತಂಡದೆದುರು ಫಿಫಾ ವಿಶ್ವಕಪ್​ನಲ್ಲಿ ಸೋತ ದಿನ ಈ ರೀತಿ ಪತ್ರ ಬರೆದಿಟ್ಟು ಮನೆಯಿಂದ ಹೋದ ಡಿನು ಮನೆಗೆ ಬಾರದ ಕಾರಣ ಆತನ ಮನೆಯವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನ್ನ ಮೆಚ್ಚಿನ ಆಟಗಾರನ ಸೋಲಿನಿಂದ ಜಿಗುಪ್ಸೆಗೊಂಡು ಪ್ರಾಣಕ್ಕೆ ಅಪಾಯ ತಂದುಕೊಂಡಿರಬಹುದೆಂಬ ಸಂಶಯದಿಂದಲೇ ಕಾರ್ಯೋನ್ಮುಖರಾದ ಪೊಲೀಸರು ಡಿನು ವಾಸವಾಗಿದ್ದ ಮನೆಯ ಬಳಿಯಿರುವ ಮೀನಾಚಿ ನದಿಯ ಬಳಿಯೆಲ್ಲ ಹುಡುಕಾಟ ನಡೆಸಿದರು. ಆದರೆ, ಮಳೆ ಬಂದು ನೀರಿನಮಟ್ಟ ಏರುತ್ತಿದ್ದ ಕಾರಣದಿಂದ ಹುಡುಕಾಟ ನಡೆಸಲು ಸಾಧ್ಯವಾಗಲಿಲ್ಲ.

ಬೆಳಗಾಗುವಷ್ಟರಲ್ಲಿ ಇರಲಿಲ್ಲ:
ಡಿನು ಕಾಣೆಯಾಗುವ ಹಿಂದಿನ ರಾತ್ರಿ 11.30ಕ್ಕೆ ಅಂದರೆ ಗುರುವಾರ ಟಿವಿಯಲ್ಲಿ ಅರ್ಜೆಂಟೈನಾ- ಕ್ರೋಷಿಯ ಫುಟ್​ಬಾಲ್​ ಮ್ಯಾಚ್​ ನೋಡುತ್ತ ಕುಳಿತಿದ್ದುದನ್ನು ಆತನ ತಂದೆ ಪಿ.ವಿ. ಅಲೆಗ್ಸಾಂಡರ್​ ನೋಡಿದ್ದರು. ಆ ದಿನ ಅರ್ಜೇಂಟೈನಾ ತಂಡ ಸೋತುಹೋಗಿತ್ತು. ಆದರೆ, ಬೆಳಗ್ಗೆ ಏಳುವಷ್ಟರಲ್ಲಿ ಮಗ ಮನೆಯಲ್ಲಿ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದ ಪತ್ರ ಆತನ ಮಂಚದ ಪಕ್ಕದಲ್ಲಿ ಮಡಿಕೆಯಾಗಿ ಕುಳಿತಿತ್ತು.

ಗೆಳೆಯರಿಗೆ ಮುಖ ತೋರಿಸಲಾಗದೆ ಆತ್ಮಹತ್ಯೆಯ ನಿರ್ಧಾರ:

ಎರಡು ದಿನ ಪೊಲೀಸರ ಹುಡುಕಾಟದ ನಂತರ ಇಂದು ಬೆಳಗ್ಗೆ ಮೀನಾಚಿ ನದಿಯಲ್ಲಿ ಡಿನು ಅವರ ದೇಹ ಪತ್ತೆಯಾಗಿದೆ. ಈ ಬಾರಿ ಮೆಸ್ಸಿ ತಂಡವೇ ಫಿಫಾ ವಿಶ್ವಕಪ್​ಗೆ ಮುತ್ತಿಡಬೇಕು ಎಂಬುದು ಡಿನು ಬಯಕೆಯಾಗಿತ್ತು. ಈ ಕುರಿತು ತನ್ನ ಪುಸ್ತಕದಲ್ಲಿಯೂ ಬರೆದಿಟ್ಟಿದ್ದ ಡಿನು, ಆಫೀಸಿನಿಂದ ಹೊರಡುವಾಗ ತನ್ನ ಸ್ನೇಹಿತರೊಂದಿಗೆ ಈ ಬಾರಿ ಅರ್ಜೆಂಟೈನಾ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿಬಂದಿದ್ದರು. ಪಂದ್ಯದಲ್ಲಿ ಅಜೈಂಟೈನಾ ತಂಡ ಸೋತ ಕಾರಣ ರಾತ್ರಿ ಸ್ನೇಹಿತರೆಲ್ಲ ಕರೆಮಾಡತೊಡಗಿದರು. ಇದರಿಂದ ಬೆಳಗ್ಗೆ ತನ್ನ ಸ್ನೇಹಿತರಿಗೆ ಮುಖ ತೋರಿಸುವುದು ಹೇಗೆಂಬ ಭಯ, ಚಡಪಡಿಕೆಗೆ ಒಳಗಾದ ಅಲೆಕ್ಸ್​ ಮೊಬೈಲ್​ ಸ್ವಿಚ್​ ಆಫ್​ ಮಾಡಿ, ಪತ್ರ ಬರೆದಿಟ್ಟು ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫುಟ್​ಬಾಲ್​ ಪಂದ್ಯದ ದೊಡ್ಡ ಅಭಿಮಾನಿಯಾಗಿದ್ದ ಡಿನು ಅಲೆಕ್ಸ್​ ಎಂದೂ ಫುಟ್​ಬಾಲ್​ ಆಡಿದವರಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಮೆಸ್ಸಿಯ ಆಟ ನೋಡಲೆಂದೇ ಫುಟ್​ಬಾಲ್​ ನೋಡುತ್ತಿದ್ದ ಅಭಿಮಾನಿಯಾಗಿದ್ದರು. ಪೊಲೀಸರು ಡಿನು ರೂಮನ್ನು ಹುಡುಕಾಡಿದಾಗ ಅರ್ಜೆಂಟೈನಾ ತಂಡದ ಜೆರ್ಸಿ ಮತ್ತು ಮೆಸ್ಸಿ ಚಿತ್ರವಿರುವ ಮೊಬೈಲ್​ ಕವರ್​ ಸಿಕ್ಕಿತ್ತು.
ಕೊಟ್ಟಾಯಂನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್​ ಆಗಿ ಕೆಲಸ ಮಾಡುತ್ತಿದ್ದ ಡಿನು ಅಲೆಕ್ಸ್​ ಕೇರಳದ ರಾಜ್ಯ ಸಾರ್ವಜನಿಕ ಸೇವಾ ಆಯೋಗ ನಡೆಸಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು, ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದರು.

Comments are closed.