ಕರ್ನಾಟಕ

ಪತ್ನಿಯನ್ನು ಕೊಂದು, ಮಕ್ಕಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ₹55 ಕೋಟಿ ಸಾಲ ಮಾಡಿದ್ದ !

Pinterest LinkedIn Tumblr

ಬೆಂಗಳೂರು: ಪತ್ನಿಯನ್ನು ಕೊಂದು, ಮಕ್ಕಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ಗಣೇಶ್, ₹55 ಕೋಟಿಯಷ್ಟು ಸಾಲ ಮಾಡಿರುವ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಆರೋಪಿಯನ್ನು ಬಂಧಿಸಿರುವ ಜಯನಗರ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅದೇ ವೇಳೆ ಸಾಲದ ಬಗ್ಗೆ ಆತ ಹೇಳಿಕೊಂಡಿದ್ದಾನೆ.

‘ವಿವಿಧ ಬ್ಯಾಂಕ್‌ಗಳಲ್ಲಿ ₹45 ಕೋಟಿ ಸಾಲ ಮಾಡಿದ್ದೇನೆ. ಸ್ನೇಹಿತರು ಹಾಗೂ ಸಂಬಂಧಿಕರಿಂದ ₹10 ಕೋಟಿ ಸಾಲ ಪಡೆದುಕೊಂಡಿದ್ದೇನೆ. ರಿಯಲ್ ಎಸ್ಟೇಟ್ ಉದ್ಯಮ ಹಾಗೂ ರೆಸಾರ್ಟ್‌ ವ್ಯವಹಾರದಲ್ಲಿ ನಷ್ಟ ಉಂಟಾಗಿದೆ. ಬ್ಯಾಂಕ್‌ನವರು ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದರು’ ಎಂದು ಆತ ತಿಳಿಸಿದ್ದಾನೆ. ಜಯನಗರದಲ್ಲಿರುವ ತನ್ನ ಮನೆಯನ್ನು ಮಾರಾಟ ಮಾಡಲು ಆತ ಯೋಚಿಸಿದ್ದ. ಅದಕ್ಕೆ ವಿರೋಧ ವ್ಯಕ್ತ
ಪಡಿಸಿದ್ದಕ್ಕಾಗಿಯೇ ಪತ್ನಿ ಸಹನಾರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ತಿಂಗಳಿನಿಂದ ₹1 ಸಾವಿರಕ್ಕೂ ಬೇರೆಯವರ ಬಳಿ ಕೈ ಚಾಚುವ ದುಸ್ಥಿತಿ ಬಂದಿತ್ತು. ಪತ್ನಿಯನ್ನು ಕೊಲೆ ಮಾಡಿದ ಬಳಿಕ, ‘ಅಮ್ಮನನ್ನು ಏಕೆ ಕೊಲೆ ಮಾಡಿದಿ’ ಎಂದು ಮಕ್ಕಳು ಪ್ರಶ್ನಿಸುತ್ತಿದ್ದರು. ಉತ್ತರ ಕೊಡಲಾಗದೆ, ಅವರ ಮೇಲೂ ಗುಂಡು ಹಾರಿಸಿದೆ. ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಹೊರಟಿದ್ದಾಗಲೇ ನನ್ನನ್ನು ಬಂಧಿಸಲಾಯಿತು’ ಎಂದು ಆತ ಹೇಳಿರುವುದಾಗಿ ಪೊಲೀಸರು ವಿವರಿಸಿದರು.

‘ತನ್ನ ರಕ್ಷಣೆಗಾಗಿ ಆರೋಪಿ, ಪರವಾನಗಿ ಪಡೆದು ಪಿಸ್ತೂಲ್ ಖರೀದಿಸಿದ್ದ. ಅದರಿಂದಲೇ ಆತ ಕೃತ್ಯ ಎಸಗಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ ಎರಡು ದಿನ ಕಸ್ಟಡಿಗೆ ಪಡೆದುಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಮಕ್ಕಳು ಅಪಾಯದಿಂದ ಪಾರು: ಗುಂಡು ತಗುಲಿ ಗಾಯಗೊಂಡ ಮಕ್ಕಳಾದ ಸಿದ್ದಾರ್ಥ್‌ ಹಾಗೂ ಸಾಕ್ಷಿಯನ್ನು ಕನಕಪುರ ರಸ್ತೆಯ ಆಸ್ಟ್ರಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಅವರಿಬ್ಬರ ದೇಹದಲ್ಲಿದ್ದ ಮೂರು ಗುಂಡುಗಳನ್ನು ಹೊರಗೆ ತೆಗೆದಿದ್ದಾರೆ.

‘ಸಾಕ್ಷಿಗೆ ಬಿದ್ದಿದ್ದ ಒಂದು ಗುಂಡು ದೇಹ ಸೀಳಿಕೊಂಡು ಹೊರಗೆ ಹೋಗಿದೆ. ಇನ್ನೊಂದು ಗುಂಡು, ಆಕೆಯ ಹೊಟ್ಟೆಯಲ್ಲೇ ಇತ್ತು. ಸಿದ್ಧಾರ್ಥ್ ದೇಹದಲ್ಲಿ ಎರಡು ಗುಂಡುಗಳು ಇದ್ದವು. ಅವುಗಳನ್ನು ಹೊರಗೆ ತೆಗೆಯಲಾಗಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಅವರಿಬ್ಬರನ್ನು ತುರ್ತು ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ’ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದರು.

ಎರಡು ಎಫ್‌ಐಆರ್‌ ದಾಖಲು: ಸಹನಾರನ್ನು ಕೊಲೆ ಮಾಡಿದ ಆರೋಪದಡಿ ಜಯನಗರ ಠಾಣೆ, ಮಕ್ಕಳ ಅಕ್ರಮ ಬಂಧನ ಮತ್ತು ಅವರ ಕೊಲೆಗೆ ಯತ್ನಿಸಿದ ಆರೋಪದಡಿ ಕಗ್ಗಲೀಪುರ ಠಾಣೆ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಸಹನಾರ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ರಾತ್ರಿ ನಡೆಸಿ, ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಶನಿವಾರ ಅಂತ್ಯಕ್ರಿಯೆ ನಡೆಯಿತು.

Comments are closed.