ಕರ್ನಾಟಕ

ದಯಾಮರಣ ಕೋರಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ

Pinterest LinkedIn Tumblr


ಬೆಳಗಾವಿ: ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಬರದೆ ಜೀವನ ಕಷ್ಟಕರವಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯವರು ಹಣ ನೀಡದೆ ಸತಾಯಿಸುತ್ತಿರುವುದರಿಂದ ಬಹಳ ನೊಂದಿದ್ದು, ಕುಟುಂಬದ ಸದಸ್ಯರಿಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಖಾನಾಪುರ ತಾಲೂಕು ಲಿಂಗನಮಕ್ಕಿ ಗ್ರಾಮದ ಕಬ್ಬು ಬೆಳೆಗಾರ ಶಂಕರ ಮಾಟೊಳ್ಳಿ ಎಂಬುವರು ಪತ್ರ ಬರೆದಿದ್ದಾರೆ.

ಮೇ 10ರಂದು ರಿಜಿಸ್ಟರ್‌ ಅಂಚೆ ಮೂಲಕ ಅವರು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಈ ಪತ್ರ ಕಳಿಸಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಒಡೆತನದ ಗೋಕಾಕ ತಾಲೂಕಿನ ಹಿರೇನಂದಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸಲಾಗಿತ್ತು. ಗಾಡಿ ಬಾಡಿಗೆ ಹಾಗೂ ಕಟಾವ್‌ ಸೇರಿ 80 ಸಾವಿರದಿಂದ ಲಕ್ಷದವರೆಗೆ ಹಣ ಬರಬೇಕಿದೆ.

ಕಾರ್ಖಾನೆಯ ಅಧಿಕಾರಿಗಳು ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಶಂಕರ ಮಾಟೊಳ್ಳಿ ಅವರ ಪುತ್ರ ಬಾಳಪ್ಪ “ಉದಯವಾಣಿ’ಗೆ ತಿಳಿಸಿದರು. ಇದಲ್ಲದೆ, ರಾಮದುರ್ಗ ತಾಲೂಕಿನಲ್ಲಿರುವ ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಸುಮಾರು 50 ಸಾವಿರ ಬರಬೇಕಿದೆ. ಆಗ ಕಾರ್ಖಾನೆಯವರು ಟನ್‌ ಕಬ್ಬಿಗೆ 2,500 ರೂ. ದರ ಹೇಳಿ ನಂತರ 1,300 ರೂ. ನೀಡಿ ಮೋಸ ಮಾಡಿದ್ದಾರೆ. ಈ ಹಣವೂ ಪೂರ್ಣವಾಗಿ ಪಾವತಿಯಾಗಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. 4 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ಕಾರ್ಖಾನೆಗೆ ಕಳಿಸುತ್ತಿ  ದ್ದೇವೆ. ಬ್ಯಾಂಕಿನಲ್ಲಿ 7.5 ಲಕ್ಷ ರೂ. ಸಾಲ ಮಾಡಲಾಗಿದೆ. ತಂದೆ, ತಾಯಿಯ ಚಿಕಿತ್ಸೆ ಹಾಗೂ ಸಾಲ ತೀರಿಸಲು ಇದ್ದ ಲಾರಿಯನ್ನೂ ಮಾರಾಟ ಮಾಡಿದ್ದೇವೆ ಎಂದು ಅವರು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

Comments are closed.