ಕರ್ನಾಟಕ

ಗೌರಿ ಹತ್ಯೆ ಪ್ರಕರಣ: ಆರೋಪಿಗಳಿಗೆ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌!

Pinterest LinkedIn Tumblr


ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಆರೋಪಿಗಳಿಗೆ ವಿಚಾರಣೆ ವೇಳೆ ಪೊಲೀಸರು “ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌’ (ಅಮಾನವೀಯ ಚಿತ್ರ ಹಿಂಸೆ) ನೀಡಿದ್ದಾರೆ ಎಂದು ಆರೋಪಿಗಳ ಪರ ವಕೀಲರು ಸೋಮವಾರ ಹೈಕೋರ್ಟ್‌ಗೆ ಲಿಖಿತ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ.ಕೆ.ಎನ್‌.ಫ‌ಣೀಂದ್ರ ಅವರಿದ್ದ ಏಕಸದಸ್ಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ವಕೀಲ ಎನ್‌.ಪಿ.ಅಮೃತೇಶ್‌, ನಾಲ್ವರು ಶಂಕಿತ ಆರೋಪಿಗಳಾದ ಸುಜಿತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌, ಮನೋಹರ್‌ ಯಡವೆ, ಅಮೋಲ್‌ ಕಾಳೆ ಮತ್ತು ಅಮಿತ್‌ ರಾಮಚಂದ್ರ ದೇಗ್ವೇಕರ್‌ಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣದ ತನಿಖೆ ವೇಳೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ಈ ಬಗ್ಗೆ ವಿಶೇಷ ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ನಾಲ್ವರು ಶಂಕಿತ ಆರೋಪಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಏಕಸದಸ್ಯಪೀಠದಲ್ಲಿ ನಡೆದಿದೆ.

ಸೋಮವಾರ ನಡೆದ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸಿ ವಾದ ಮಂಡಿಸಿದ ವಕೀಲರು, ಅರ್ಜಿದಾರರಿಗೆ (ಶಂಕಿತ ಆರೋಪಿಗಳು) ಪೊಲೀಸರು ತನಿಖೆ ವೇಳೆ ದೇಹದ ಹಲವು ಭಾಗಗಳಿಗೆ ಬಲವಾಗಿ ಹೊಡೆದು ಚಿತ್ರಹಿಂಸೆ ನೀಡಿ¨ªಾರೆ. ಮುಖ ಊದಿಕೊಂಡಿದೆ.

ಅಧೀನ ನ್ಯಾಯಾಲಯದ ವಿಚಾರಣೆ ವೇಳೆ ಅಮೋಲ್‌ ಕಾಳೆ ಕೆನ್ನೆಗೆ ಗಾಯ ಆಗಿದ್ದನ್ನು ಗಮನಿಸಿದ ನ್ಯಾಯಾಧೀಶರು ವಿಚಾರಿಸಿದಾಗ ತನಿಖೆ ವೇಳೆ ಪೊಲೀಸರು ಹೊಡೆದಿದ್ದಾರೆ ಎಂದು ಆತ ಹೇಳಿದ್ದಾನೆ. ತನಿಖೆಯ ಹೆಸರಲ್ಲಿ ಚಿತ್ರಹಿಂಸೆ ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟ ಆದೇಶ ಹೊರಡಿಸಿದೆ ಎಂದರು.

ಇದನ್ನು ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕ ರಾಚಯ್ಯ, ಅರ್ಜಿದಾರರಿಗೆ ಪೊಲೀಸರು ಚಿತ್ರಹಿಂಸೆ‌ ನೀಡಿಲ್ಲ. 4 ಬಾರಿ ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಒಂದು ಬಾರಿಯೂ ಆರೋಪಿಗಳು ತಮಗಾಗಿರುವ ಚಿತ್ರಹಿಂಸೆಯ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಕೆಳ ನ್ಯಾಯಾಲಯಕ್ಕೆ ದಾಖಲೆ ಕೇಳಿದ ಹೈಕೋರ್ಟ್‌: ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಶಂಕಿತ ಆರೋಪಿಗಳಿಗೆ ವಿಚಾರಣೆ ವೇಳೆ ಪೊಲೀಸರು ಚಿತ್ರಹಿಂಸೆ ನೀಡಿದ ಹಾಗೂ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿಲ್ಲ ಎಂಬ ಅರ್ಜಿದಾರರ ಪರ ವಕೀಲರ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲಿಸಬೇಕಾಗಿದೆ ಎಂದರು.

ಅರ್ಜಿದಾರರ ಪರ ವಕೀಲರ ಆರೋಪಗಳ ಬಗ್ಗೆ ದಾಖಲೆ ಮತ್ತು ವರದಿಗಳನ್ನು ಸಲ್ಲಿಸುವಂತೆ 1ನೇ ಮತ್ತು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು. ಇದೇ ವೇಳೆ, ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರತಿಯನ್ನು ಎರಡೂ ಅಧೀನ ನ್ಯಾಯಾಲಯಗಳಿಗೆ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು.

Comments are closed.