ಕರ್ನಾಟಕ

ಕಲಬುರ್ಗಿ, ದಾಬೋಲ್ಕರ್, ಪನ್ಸಾರೆ, ಗೌರಿ ಹತ್ಯೆ ಹಿಂದೆ ಒಬ್ಬನೇ ಸೂತ್ರಧಾರ?

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್‌ ಸೇರಿ ನಾಲ್ವರ ಹತ್ಯೆಗಳಲ್ಲಿಯೂ ಒಬ್ಬನೇ ವ್ಯಕ್ತಿ ಮಾಸ್ಟರ್‌ ಮೈಂಡ್‌ ಆಗಿ ಕಾರ್ಯನಿರ್ವಹಿಸಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಪ್ರಮುಖ ಆರೋಪಿ ಎಂದು ಪರಿಗಣಿಸಲಾದ ಪರುಶರಾಮ್‌ ವಾಗ್ಮೋರೆ ಹಾಗೂ ಮತ್ತೋರ್ವ ಆರೋಪಿ ಅಮೂಲ್‌ ಕಾಳೆಯಲ್ಲಿನ ಸೀಕ್ರೇಟ್‌ ಕೋಡ್‌ಗಳನ್ನು ಡಿ ಕೋಡ್‌ ಮಾಡಿ ಪರಿಶೀಲಿಸಿದಾಗ ಗೌರಿ ಹತ್ಯೆಯಲ್ಲಿ ಸೂತ್ರಧಾರ ಪಾತ್ರ ನಿರ್ವಹಿಸಿದ್ದವನೇ ವಿಚಾರವಾದಿಗಳಾದ ಎಂ.ಎಂ ಕಲಬುರ್ಗಿ, ನರೇಂದ್ರ ದಾಬೋಲ್ಕರ್‌, ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳ ರೂವಾರಿ ಎಂಬ ವಿಚಾರ ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಈ ಮಾಹಿತಿ ಮೇರೆಗೆ ನಗರಕ್ಕೆ ಆಗಮಿಸಿರುವ ಮಹಾರಾಷ್ಟ್ರದ ಎಸ್‌ಐಟಿ ಹಾಗೂ ಸಿಬಿಐ ತಂಡಗಳು, ಗೌರಿ ಹತ್ಯೆ ನಡೆಸಿರುವ ಎಸ್‌ಐಟಿ ಜತೆ ನಿರಂತರ ಚರ್ಚೆ ನಡೆಸಿದ್ದು, ಮಾಹಿತಿ ಪಡೆದುಕೊಂಡಿದೆ. ಅಲ್ಲದೆ,ಎಸ್‌ಐಟಿ ಬಳಿ ಅಮೂಲ್‌ ಕಾಳೆ ಡೈರಿಯಲ್ಲಿದ್ದ ಕೆಲವು ಅಂಶಗಳ ಪ್ರತಿಗಳನ್ನು ಪಡೆದುಕೊಂಡಿದೆ. ಮತ್ತೂಂದೆಡೆ, ಸಿಬಿಐ ತಂಡ ಪರುಶರಾಮ್‌ ವಾಗ್ಮೋರೆಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬಂದಿದೆ.ಆದರೆ,ಆರೋಪಿಗಳ ಹಿಂದೆ ನಿಂತು ಕೆಲಸ ಮಾಡಿಸಿದವರಾರು ಎಂಬುದು ಪತ್ತೆಹಚ್ಚಬೇಕಿದೆ. ಈ ಹಂತದಲ್ಲಿ ಪರುಶುರಾಮ್‌ನನ್ನು ಸಿಬಿಐ ತಂಡಕ್ಕೆ ನೀಡಲು ಆಗುವುದಿಲ್ಲ. ಸಂಪೂರ್ಣ ತನಿಖೆ ಪೂರ್ಣಗೊಳ್ಳುವ ತನಕ ನಮ್ಮ ವಶಕ್ಕೇ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜೂನ್‌ 21ಕ್ಕೆ ಜಾಮೀನು ಅರ್ಜಿ ವಿಚಾರಣೆ: ಗೌರಿಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿ ಎನ್ನಲಾದ ಮಂಡ್ಯದ ಹಿಂದೂಪರ ಸಂಘಟನೆ ಕಾರ್ಯಕರ್ತ ನವೀನ್‌ಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸೆಷನ್ಸ್‌ ಕೋರ್ಟ್‌ ಜೂನ್‌ 21ಕ್ಕೆ ಮುಂದೂಡಿದೆ. ಈ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಾಲಯ, ನವೀನ್‌ ಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರು ಕಾಲವಕಾಶ ಕೋರಿದ್ದರಿಂದ ವಿಚಾರಣೆ ಮುಂದೂಡಿತು.

Comments are closed.