ಕರ್ನಾಟಕ

ಬೆಂಗಳೂರಿನ ಉದ್ಯಮಿಗೆ ಜೀವಂತ ಗುಂಡುಗಳನ್ನು ರವಾನಿಸಿ ಬ್ಲ್ಯಾಕ್‌ಮೇಲ್!

Pinterest LinkedIn Tumblr


ಬೆಂಗಳೂರು: ಹಣ, ಆಸ್ತಿ ಅಥವಾ ಇನ್ನಾವುದೋ ವಿಚಾರಗಳಿಗೆ ಸಂಬಂಧಿಸಿ ಬೆದರಿಕೆಯೊಡ್ಡುವ ಹೊಸ “ಟ್ರೆಂಡ್‌’ ಶುರುವಾಗಿದೆ. ಇತ್ತೀಚೆಗೆ ಅಸ್ಸಾಂನ ಬಿಜೆಪಿ ಶಾಸಕನಿಗೆ ಜೀವಂತ ಗುಂಡು ರವಾನಿಸಿ ಹದಿನೈದು ದಿನಗಳಲ್ಲಿ ರಾಜೀನಾಮೆ ನೀಡುವಂತೆ ಬೆದರಿಸಿದ್ದ ಮಾದರಿಯಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರಿಗೆ ಹೆದರಿಸಿರುವ ಘಟನೆ ನಡೆದಿದೆ.

ಯಲಹಂಕದ ಪುಟ್ಟೇನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ಉದ್ಯಮಿ ರಮಣ್‌ ಸೂದ್‌(49) ಎಂಬುವರಿಗೆ ಈ ರೀತಿಯ ಬೆದರಿಕೆ ಹಾಕಲಾಗಿದೆ. 50 ಲಕ್ಷ ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು, ಎನ್‌ವಲಪ್‌ ಕವರ್‌ನಲ್ಲಿ ಜೀವಂತ ಗುಂಡು ಸಮೇತ ಮುದ್ರಿತ ಪತ್ರವೊಂದನ್ನು ಅವರ ಕಾರಿನ ಮುಂಭಾಗದ ವೈಪರ್‌ಗೆ ಸಿಕ್ಕಿಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪತ್ರದಲ್ಲಿ ನಿಮ್ಮ ಪುತ್ರನಿಗೆ ತೊಂದರೆಯಾಗಬಾರದು ಎಂದಾದರೆ 50 ಲಕ್ಷ ರೂ. ನೀಡಬೇಕು ಎಂದು ಬೆದರಿಕೆಯೊಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಿ ರಮಣ್‌ ಸೂದ್‌ ಅವರು ದುಷ್ಕರ್ಮಿಗಳು ಇಟ್ಟಿದ್ದ ಜೀವಂತ ಗುಂಡು ಹಾಗೂ ಬೆದರಿಕೆ ಪತ್ರವನ್ನು ಯಲಹಂಕ ಪೊಲೀಸ್‌ ಠಾಣೆಗೆ ನೀಡಿ, ದ‌ೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು, ಬಳಕೆಯಾಗದ ಜೀವಂತ ಗುಂಡಿನ ಮೂಲ ಪತ್ತೆ ಹಚ್ಚಲು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್‌) ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ.

ಸೂದ್‌ ಬೆನ್ನುಬಿದ್ದಿರುವ ಶಂಕೆ:
ರಮಣ್‌ ಸೂದ್‌ ಅವರ ವಹಿವಾಟು ಹಾಗೂ ಚಲನವಲನ ಗಮನಿಸಿದವರೇ ಈ ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆಯಿದೆ ಎಂಬ ಶಂಕೆಯೂ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳು ಕಳುಹಿಸಿರುವ ಪತ್ರದಲ್ಲಿ ವಿಳಾಸ ಹಾಗೂ ದೂರವಾಣಿ ಸಂಪರ್ಕ ಇಲ್ಲ. ಹೀಗಾಗಿ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ.ದೂರುದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಈ ಬೆದರಿಕೆ ತಂತ್ರ ಅನುಸರಿಸಿರುವ ಸಾಧ್ಯತೆಯಿದೆ.

ಅಪಾರ್ಟ್‌ಮೆಂಟ್‌ ಬಳಿ ಯಾವುದೇ ಸಿಸಿಟಿವಿ ಅಳವಡಿಕೆಯಾಗಿಲ್ಲ. ಹೀಗಾಗಿ ಅಕ್ಕ-ಪಕ್ಕದ ರಸ್ತೆ, ಹಾಗೂ ಮನೆಗಳ ಬಳಿಯಿದ್ದ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸುವ ಭರವಸೆ ಇದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ವಾರದಲ್ಲಿ 25 ಲಕ್ಷ ಕ್ಕೆ ಡಿಮ್ಯಾಂಡ್‌
ರಮಣ್‌ ಸೂದ್‌ ಖಾಸಗಿ ಹಾಲು ಉತ್ಪಾದಕ ಘಟಕದ ಗುತ್ತಿಗೆ ಹೊಂದಿದ್ದು, ಹಲವು ವರ್ಷಗಳಿಂದ ಕುಟುಂಬದ ಜತೆ ಪುಟ್ಟೇನಹಳ್ಳಿಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ. ಹಿರಿಯ ಮಗ ರಾಜಸ್ಥಾನದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡನೇ ಪುತ್ರ ನಗರದಲ್ಲೇ ಪಿಯುಸಿ ಓದುತ್ತಿದ್ದಾನೆ. ಕೆಲದಿನಗಳ ಹಿಂದೆ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ ಲಕ್ಷ್ಮಿ ನಾರಾಯಣ, ಬೇಸ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಸೂದ್‌ ಅವರ ಕಾರಿನ ವೈಪರ್‌ ಬಳಿ ಎನ್‌ವಲಪ್‌ ಕವರ್‌ ಇದೆ ಎಂದು ತಂದುಕೊಟ್ಟಿದ್ದರು. ಎನ್‌ವಲಪ್‌ ಕವರ್‌ ತೆರೆದು ಪರಿಶೀಲಿಸಿದಾಗ ಜೀವಂತ ಗುಂಡು ಹಾಗೂ ಪತ್ರ ಇತ್ತು. ಆ ಪತ್ರದಲ್ಲಿ ನಮಗೆ 50 ಲಕ್ಷ ನೀಡಬೇಕು. ಒಂದು ವಾರದಲ್ಲಿ ಮೊದಲ ಕಂತಿನ ಮೊತ್ತವಾಗಿ 25 ಲಕ್ಷ ರೂ. ನೀಡಬೇಕು ಇಲ್ಲದಿದ್ದರೆ ನಿಮ್ಮ ಮಗ ಅಪಾಯದಲ್ಲಿ ಸಿಲುಕುತ್ತಾನೆ ಎಂದು ಬೆದರಿಕೆ ಹಾಕಲಾಗಿತ್ತು.

ಗುಂಡಿನ ದಾಳಿ ನಡೆದಿತ್ತು
ಇತ್ತೀಚೆಗೆ ಜೋಳ‌ ರಫ್ತು ಉದ್ಯಮಿ ಮೇಲೂ ನಗರದಲ್ಲಿ ಗುಂಡಿನ ದಾಳಿ ನಡೆದಿತ್ತು. ಕೋರಮಂಗಲದಲ್ಲಿ ಫೆ.2ರಂದು ಮಧ್ಯಾಹ್ನ ರಹೇಜಾ ಆರ್ಕೆಡ್‌ನ‌ಲ್ಲಿರುವ ಫಾರ್ಮ್ ಇಂಡಿಯಾ ಇಂಪ್ಲಿಕ್ಸ್‌ ಪ್ರೈ.ಲಿಮಿಟೆಡ್‌ ಕಂಪೆನಿ ಮಾಲೀಕ ಕನ್ಹಯ್ಯ ಲಾಲ್‌ ಅಗರ್‌ವಾಲ್‌ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಉದ್ಯಮಿ ಪ್ರಾಣಾಪಾಯದಿಂದ ಪಾರಾಗಿದ್ದರು.

Comments are closed.