ಕರ್ನಾಟಕ

ಟೆಸ್ಟ್‌ ಡ್ರೈವ್‌ನಿಂದ ತಂದಿದ್ದ ಜಾಗ್ವಾರ್ ಕಾರನ್ನು ತೋರಿಸಿ ಯುವತಿಯನ್ನು ವರಿಸಿದ ಭೂಪ!

Pinterest LinkedIn Tumblr


ಬೆಂಗಳೂರು: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ. ಇದೇ ರೀತಿ ಬೆಂಗಳೂರಿನ ವ್ಯಕ್ತಿಯೊಬ್ಬ ಸುಳ್ಳಿನ ಸರಮಾಲೆಗಳ ಮೂಲಕ ಕೊಡಗು ಮೂಲದ ಯುವತಿಯನ್ನು ಮದುವೆಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಈತ ಪೊಲೀಸರ ಬಲೆಗೆ ಬಿದ್ದಿದ್ದು, ಘಟನೆಯನ್ನು ತನಿಖೆ ಮಾಡುತ್ತಿರುವ ತನಿಖಾಧಿಕಾರಿಗಳೇ ವಂಚಕನ ಸ್ಟೋರಿ ಕೇಳಿ ಶಾಕ್‌ಗೊಳಗಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಆರೋಪಿಗೆ 35 ವರ್ಷ ವಯಸ್ಸಾಗಿದ್ದು, ಕೊಡಗು ಜಿಲ್ಲೆಯ ವಧುವಿನ ಕುಟುಂಬವನ್ನು ಕಳೆದ 7 ತಿಂಗಳ ಹಿಂದೆ ಮದುವೆಯಾಗಲು ಮುಂದಾಗಿದ್ದ. ಅಲ್ಲದೆ, ಪರಿಚಯಸ್ಥರ ಮೂಲಕ ಮದುವೆಯನ್ನು ಫಿಕ್ಸ್ ಮಾಡಲಾಗಿತ್ತು. ಇನ್ನು, ಪೊಲೀಸರ ಬಲೆಗೆ ಬಿದ್ದ ವ್ಯಕ್ತಿ ತನ್ನ ಕೃತ್ಯವನ್ನು ಸಮರ್ಥನೆ ಮಾಡಿಕೊಂಡಿದ್ದಾನೆ.

ತನ್ನ ವಯಸ್ಸಿನ ವಿಚಾರದಲ್ಲೂ ಮಹಿಳೆಯ ಕುಟುಂಬಕ್ಕೆ ಸುಳ್ಳು ಹೇಳಿದ್ದ ವ್ಯಕ್ತಿ, ತಾನು ಬೆಂಗಳೂರಿನಲ್ಲಿರುವ ಟಾಟಾ ಮೋಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 60 ಸಾವಿರ ಸಂಬಳ ಪಡೆಯುತ್ತಿರುವುದಾಗಿಯೂ ಹೇಳಿಕೊಂಡಿದ್ದ. ಅಲ್ಲದೆ, ಇದಕ್ಕೆ ಸಂಬಂಧಪಟ್ಟ ಸುಳ್ಳು ದಾಖಲೆಗಳನ್ನು ಸಹ ವಂಚಕ, ತನ್ನ ಹೆಂಡತಿಯ ಕುಟುಂಬ ವರ್ಗದವರಿಗೆ ತೋರಿಸಿದ್ದಾನೆ ಎಂದು ಬೆಂಗಳೂರಿನ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರದ ಹಿರಿಯ ಕೌನ್ಸೆಲರ್ ಬಿ.ಎಸ್‌.ಸರಸ್ವತಿ ಮಾಹಿತಿ ನೀಡಿದ್ದಾರೆ. ಜತೆಗೆ, ತನ್ನ ಸ್ನೇಹಿತನ ಕೆಟಿಎಂ ಡ್ಯೂಕ್ ಬೈಕ್ ಅನ್ನು ತೋರಿಸಿ ಇದು ತನ್ನದು ಎಂದು ಹೇಳಿಕೊಂಡಿದ್ದಲ್ಲದೆ, ಟೆಸ್ಟ್‌ ಡ್ರೈವ್‌ನಿಂದ ತಂದಿದ್ದ ಜಾಗ್ವಾರ್ ಕಾರನ್ನು ತನ್ನ ಭಾವಿ ಪತ್ನಿಗೆ ಕೊಂಡುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದ.

ಅಲ್ಲದೆ, ಕೆಂಗೇರಿಯಲ್ಲಿ ನಿರ್ಮಾಣವಾಗುತ್ತಿರುವ ಬಂಗಲೆಯೊಂದು ತನ್ನದೇ ಎಂದು ಹೇಳಿಕೊಂಡಿರುವ ಆರೋಪಿ, ಆ ಬಂಗಲೆಯನ್ನು ತೋರಿಸಿ ತಾನು ಈಗ ಆರ್‌.ಆರ್.ನಗರದಲ್ಲಿ ವಾಸ ಮಾಡುತ್ತಿರುವ ಸ್ವಂತ ಮನೆಯನ್ನು ಬಿಟ್ಟು ಈ ಬಂಗಲೆಗೆ ಶಿಫ್ಟ್ ಮಾಡುವುದಾಗಿಯೂ ಸುಳ್ಳು ಹೇಳಿದ್ದಾನೆ. ಜತೆಗೆ ಬಂಗಲೆಯನ್ನು ನಿರ್ಮಿಸುತ್ತಿರುವ ಕಾರ್ಮಿಕರಿಗೆ ಆರೋಪಿ ಹಣ ಕೊಟ್ಟಿದ್ದಾನೆ ಎನ್ನಲಾಗಿದೆ.

ಇನ್ನು, ಇವೆಲ್ಲವನ್ನು ನಂಬಿಕೊಂಡು ವಂಚಕನನ್ನು ಮದುವೆಯಾದ ಪತ್ನಿಗೆ ಅವನ ಸುಳ್ಳುಗಳು ಒಂದೊಂದಾಗಿ ಬೆಳಕಿಗೆ ಬಂದಿದ್ದು, ಆರ್‌.ಆರ್‌. ನಗರದಲ್ಲಿರುವ ವಾಸ ಮಾಡುತ್ತಿರುವ ಮನೆ ಸಹ ಸ್ವತಂತದ್ದಲ್ಲ. ಜತೆಗೆ 6 ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೆ, ಪತಿಯ ಕುಡುಕ ತಂದೆ, ತಾಯಿ ಹಾಗೂ ಸಹೋದರ ಸಹ ಅದೇ ಫ್ಲಾಟ್‌ನಲ್ಲಿ ವಾಸ ಮಾಡುತ್ತಿದ್ದು, ಕೆಂಗೇರಿಯ ಮನೆ, ಕೆಟಿಎಂ ಬೈಕ್ ಹಾಗೂ ಜಾಗ್ವಾರ್ ಕಾರು ಕೊಂಡುಕೊಂಡಿರುವುದು ಸುಳ್ಳು ಎಂದು ಸಹ ಅವಳಿಗೆ ತಿಳಿದುಬಂದಿದೆ. ಅಲ್ಲದೆ, ಅವನು ಟಾಟಾ ಕಂಪನಿಯ ಉದ್ಯೋಗಿಯಲ್ಲ ಎಂಬುದು ಬೆಳಕಿಗೆ ಬಂದಿದ್ದು, ಪತಿಯ ವಯಸ್ಸು ತನಗಿಂತ ಸಾಕಷ್ಟು ಹೆಚ್ಚು ಹಾಗೂ ಅವನು ಶಾಲೆಯಿಂದ ಡ್ರಾಪ್‌ಔಟ್ ಆಗಿದ್ದಾನೆ ಎಂಬುದು ಗಮನಕ್ಕೆ ಬಂದಿದೆ.

ನಂತರ ಈ ವಂಚನೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಆರೋಪಿ ಹಾಗೂ ಅವನ ತಾಯಿ ಮಹಿಳೆಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಅಲ್ಲದೆ, ಪತಿಯ ತಂದೆ ಸಹ ಕುಡಿದ ನಶೆಯಲ್ಲಿ ಆಕೆಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹಲವರು ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲ ನಡೆದ ಬಳಿಕ ಮಹಿಳೆ ಮೇ ತಿಂಗಳಲ್ಲಿ ಕೊಡಗಿಗೆ ಓಡಿಹೋಗಿದ್ದು, ಕಳೆದ ವಾರ ತನ್ನ ಕುಟುಂಬದ ಒತ್ತಾಯದ ಬಳಿಕ ವಿಚ್ಛೇದನ ಪಡೆಯುವ ಸಲುವಾಗಿ ಬೆಂಗಳೂರಿನ ಪೊಲೀಸ್ ಕಮಿಷನರೇಟ್ ಕಚೇರಿಗೆ ಹೋಗಿ ದೂರು ನೀಡಿದ್ದಾಳೆ. ನಂತರ ಕೌನ್ಸೆಲಿಂಗ್‌ಗೆ ಪತಿಯನ್ನು ಕರೆಸಿಕೊಳ್ಳಲಾಗಿತ್ತಾದ್ರೂ ತನ್ನ ತಪ್ಪಿನ ಬಗ್ಗೆ ಅವನಿಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎಂದು ಕೌನ್ಸೆಲರ್‌ಗಳು ಮಾಹಿತಿ ನೀಡಿದ್ದಾರೆ.

Comments are closed.