ಕರ್ನಾಟಕ

ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಗೆಲುವು; ಸೋತ ಬಿಜೆಪಿ

Pinterest LinkedIn Tumblr

ಬೆಂಗಳೂರು: ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದಾರೆ.

ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರದ ಮತಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಜಯದ ನಗೆ ಬೀರಿದ್ದಾರೆ. ಈ ಮೂಲಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 80ಕ್ಕೆ ಏರಿದಂತೆ ಆಗಿದೆ. ಪುತ್ರಿ ಸೌಮ್ಯಾರೆಡ್ಡಿ ಅವರ ಪರವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿ ಚುರುಕಿನ ಪ್ರಚಾರ ನಡೆಸಿದ್ದರು.

ಸೌಮ್ಯಾ ಅವರು 54,457 ಮತಗಳನ್ನು ಗಳಿಸಿ ಒಟ್ಟು 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್‌ಬಾಬು 51,568 ವಿರುದ್ಧ ಗೆಲುವು ಸಾಧಿಸಿದ್ದಾರೆ.

ನಗರದ ಎಸ್.ಎಸ್.ಎಂ.ಆರ್.ವಿ.ಕಾಲೇಜಿನಲ್ಲಿ ಒಟ್ಟು 16 ಸುತ್ತಿನಲ್ಲಿ ಮತ ಎಣಿಕೆ ನಡೆಯಿತು. ಸೌಮ್ಯಾರೆಡ್ಡಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸುವುದರ ಮೂಲಕ ಜಯವನ್ನು ಸಂಭ್ರಮಿಸಿದರು.

ರಾಜ್ಯದ ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರಿಗೆ 1861 ಮತಗಳನ್ನು ಗಳಿಸಲಷ್ಟೇ ಸಾಧ್ಯವಾಗಿದೆ.

ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲೇ ಬಿಜೆಪಿ ಅಭ್ಯರ್ಥಿ ಬಿ.ಎನ್‌.ವಿಜಯಕುಮಾರ್‌ ಹೃದಯಾಘಾತದಿಂದ ನಿಧನರಾಗಿದ್ದರು. ಇದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಬಿ.ಎನ್‌.ವಿಜಯಕುಮಾರ್‌ ಅವರ ಸಹೋದರ ಬಿ.ಎನ್. ಪ್ರಹ್ಲಾದ್‌ಬಾಬು ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.

Comments are closed.