ಕರ್ನಾಟಕ

ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಸಂಬಂಧಿ ದರೋಡೆಕೋರರಿಂದ ದರೋಡೆಕೋರ ಸುರೇಶ್‌ ಹತ್ಯೆ

Pinterest LinkedIn Tumblr


ಬೆಂಗಳೂರು: ಕಳೆದ ಫೆಬ್ರವರಿಯಲ್ಲಿ ಹಾಡ ಹಗಲೇ, ಪ್ರಯಾಣಿಕರಿದ್ದ ಬಿಎಂಟಿಸಿ ಬಸ್‌ನಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಂದಿದ್ದ ಪ್ರಕರಣ ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಆಂಧ್ರಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಾಲಬ್ರಹ್ಮಯ್ಯ (60) ಮತ್ತು ಆತನ ಮಕ್ಕಳಾದ ಅಭಿಷೇಕ್‌ (32), ಧನರಾಜ್‌ (24) ಬಂಧಿತರು.

ಇವರಿಂದ 12 ಲಕ್ಷ ರೂ. ಮೌಲ್ಯದ 50 ಮೊಬೈಲ್‌ಗ‌ಳನ್ನು ವಶಕ್ಕೆ ಪಡೆಯಲಾಗಿದೆ. ಫೆ.21ರಂದು ಬೆಳಗ್ಗೆ 9.20ರ ಸುಮಾರಿಗೆ ಕೋನಪ್ಪನ ಅಗ್ರಹಾರ ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುರೇಶ್‌ ಎಂಬಾತನನ್ನು ಪ್ರಯಾಣಿಕರ ಎದುರೇ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದ ಆರೋಪಿಗಳು ತಲೆಮರೆಸಿಕೊಂಡಿದ್ದರು.

ಆರೋಪಿಗಳು ಮತ್ತು ಕೊಲೆಯಾದ ಸುರೇಶ್‌ ಸಂಬಂಧಿಗಳಾಗಿದ್ದು, ಮೊದಲು ಜತೆಗಿದ್ದೇ ದರೋಡೆ ಕೃತ್ಯ ಎಸಗುತ್ತಿದ್ದರು. ಆದರೆ, ನಂತರದಲ್ಲಿ ಬೇರೆಯಾಗಿದ್ದರು. ಹೀಗಾಗಿ ಹಳೇ ದ್ವೇಷ ಹಾಗೂ ಕೊಲೆ ಪ್ರಕರಣವೊಂದರಲ್ಲಿ ಸುರೇಶ್‌ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂಬ ಶಂಕೆ ಮೇಲೆ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸುರೇಶ್‌ ಹತ್ಯೆ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಉಪವಿಭಾಗದ ಎಸಿಪಿ ಕೆ.ಎನ್‌.ರಮೇಶ್‌ ನೇತೃತ್ವದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಇನ್ಸ್‌ಪೆಕ್ಟರ್‌ ಎಂ.ಎಸ್‌.ಬೋಳೆತ್ತಿನ, ಪಿಎಸ್‌ಐ ಪೌಲ್‌ ಪ್ರಿಯಕುಮಾರ್‌ ಅವರ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಳೆದ ಐದು ತಿಂಗಳಿಂದ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದಿಂದ ಬಂದು ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಎಲ್ಲರೂ ದರೋಡೆಕೋರರೇ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ನಿವಾಸಿ ಸುರೇಶ್‌, ಆರೋಪಿ ಪಾಲಬ್ರಹ್ಮಯ್ಯನ ನಾದಿನಿಯ ಗಂಡ. ಈ ಹಿಂದೆ ಈ ಎರಡು ಕುಟುಂಬದವರು ಒಂದೇ ತಂಡದಲ್ಲಿ ಗುರುತಿಸಿಕೊಂಡಿದ್ದು, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದಲ್ಲಿ ದರೋಡೆ, ಕೊಲೆ ಕೃತ್ಯಗಳಲ್ಲಿ ತೊಡಗಿದ್ದರು.

ಈ ಮಧ್ಯೆ ಸುರೇಶ್‌ ಮತ್ತು ಪಾಲಬ್ರಹ್ಮಯ್ಯ ನಡುವೆ ಡಕಾಯಿತಿ ಹಣ ಹಂಚಿಕೆ ವಿಚಾರದಲ್ಲಿ ಮಾರಾಮಾರಿ ನಡೆದಿತ್ತು. ಇದೇ ದ್ವೇಷದ ಮೇಲೆ 1992ರಲ್ಲಿ ತಮಿಳುನಾಡಿನ ಗುಡಿಯಾತ್ತಮ್‌ ಠಾಣೆ ಪೊಲೀಸರಿಗೆ ದರೋಡೆ ಪ್ರಕರಣವೊಂದರಲ್ಲಿ ಸುರೇಶ್‌ನನ್ನು ಪಾಲಬ್ರಹ್ಮಯ್ಯ ಪೊಲೀಸರಿಗೆ ಹಿಡಿದುಕೊಟ್ಟಿದ್ದು, ಪ್ರಕರಣದಲ್ಲಿ ಸುರೇಶ್‌ಗೆ 14 ವರ್ಷ ಜೈಲು ಶಿಕ್ಷೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದುಕೊಂಡೆ ಸುರೇಶ್‌ ತನ್ನ ಸಹೋದರ ಸಾಯಿಕುಮಾರ್‌ ಮೂಲಕ 1997ರಲ್ಲಿ ಕಡಪ ಸಿಸಿಎಸ್‌ ಪೊಲೀಸರಿಗೆ ದರೋಡೆ, ಕೊಲೆ ಪ್ರಕರಣದಲ್ಲಿ ಪಾಲಬ್ರಹ್ಮಯ್ಯನ ಬಂಧನಕ್ಕೆ ಸಹಾಯ ಮಾಡಿದ್ದ. ಪ್ರಕರಣದಲ್ಲಿ ಪಾಲಬ್ರಹ್ಮಯ್ಯನಿಗೆ 9 ವರ್ಷ ಶಿಕ್ಷೆಯಾಗಿತ್ತು. 2005ರಲ್ಲಿ ಜೈಲಿನಿಂದ ಹೊರಬಂದ ಪಾಲಬ್ರಹ್ಮಯ್ಯ ಮತ್ತು ಸಹಚರರು, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಜೇಬುಕಳ್ಳತನ ಮಾಡುತ್ತಿದ್ದರು.

ಈ ಮಧ್ಯೆ 2013ರಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಮತ್ತೂಮ್ಮೆ ಆರೋಪಿಗಳನ್ನು ಯರ್ರಗುಂಟ ಪೊಲೀಸರು ಬಂಧಿಸಿದ್ದರು. ಇದಕ್ಕೆ ಸುರೇಶ್‌ ನೀಡಿದ ಮಾಹಿತಿಯೇ ಕಾರಣ ಎಂದು ಭಾವಿಸಿದ ಆರೋಪಿಗಳು, ಜೈಲಿನಿಂದ ಹೊರಬಂದ ಬಳಿಕ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ಸುರೇಶ್‌ ಸಹೋದರ ಸಾಯಿಕುಮಾರ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸುರೇಶ್‌ ಹಾಗೂ ಈತನ ಮಗ ರವೀಂದ್ರಕುಮಾರ್‌ ಪಾಲಬ್ರಹ್ಮಯ್ಯ ಮತ್ತು ಮಕ್ಕಳ ಮೇಲೆ ಸಂಪಂಗಿರಾಮನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಿದ್ದರು.

30 ಲಕ್ಷ ರೂ. ದಂಡ: ಈ ಮಧ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಡೋನ್‌ ಎಂಬ ಗ್ರಾಮದಲ್ಲಿ ಅಲ್ಲಿನ ಕುಲ ಪಂಚಾಯ್ತಿಯು, ಪಾಲಬ್ರಹ್ಮಯ್ಯನಿಗೆ ಸುರೇಶ್‌ 30 ಲಕ್ಷ ರೂ. ನೀಡಬೇಕು ಎಂದು ತೀರ್ಪು ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸುರೇಶ್‌, ಕುಲ ಪಂಚಾಯ್ತಿ ಆದೇಶದಂತೆ ಪಾಲಬ್ರಹ್ಮಯ್ಯನಿಗೆ ಹಣ ಪಾವತಿಸದೆ ತನ್ನ ಪುತ್ರ ಮತ್ತು ಸಹೋದರನ ಜತೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.

ಆದರೆ, ಪಾಲಬ್ರಹ್ಮಯ್ಯ ತನ್ನ ಇಬ್ಬರು ಮಕ್ಕಳೊಂದಿಗೆ ಸೇರಿ ದರೋಡೆ, ಹತ್ಯೆ ಮುಂತಾದ ಕೃತ್ಯಗಳನ್ನು ಮುಂದುವರಿಸಿದ್ದು, ಪುತ್ರ ಅಭಿಷೇಕ್‌ ಮತ್ತಿತರೆ ಸಹಚರರ ಜತೆ ಸೇರಿ 2017ರ ಮೇನಲ್ಲಿ ಆಂಧ್ರ ಪ್ರದೇಶದ ಮಂಗಳಗಿರಿ ಠಾಣಾ ವ್ಯಾಪ್ತಿಯಲ್ಲಿ ಕನಕರಾವ್‌ ಎಂಬಾತನನ್ನು ಹತ್ಯೆಗೈದು ಪೆಟ್ರೋಲ್‌ ಹಾಕಿ ಸುಟ್ಟು ತಲೆಮರೆಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಬ್ರಹ್ಮಯ್ಯ ಮತ್ತು ಆತನ ಜತೆಗಾರರ ಬಗ್ಗೆ ಸುರೇಶ್‌ ಆಗಾಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಈ ವಿಚಾರ ತಿಳಿದು ಪಾಲಬ್ರಹ್ಮಯ್ಯ ಮತ್ತು ಆತನ ಇಬ್ಬರು ಮಕ್ಕಳು ಸುರೇಶ್‌ ಬೆನ್ನು ಬಿದ್ದು ಫೆ. 21ರಂದು ಚಲಿಸುತ್ತಿದ್ದ ಬಸ್‌ನಲ್ಲೇ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದರು.

ಫೇಸ್‌ಬುಕ್‌ ಕೊಟ್ಟ ಸುಳಿವು: ಆರೋಪಿ ಪಾಲಬ್ರಹ್ಮಯ್ಯನಿಗೆ ಐದು ಗಂಡು, ಮೂರು ಹೆಣ್ಣು ಸೇರಿದಂತೆ 8 ಮಂದಿ ಮಕ್ಕಳಿದ್ದು, ಈ ಪೈಕಿ ಪ್ರೇಮ್‌ಕುಮಾರ್‌ ಎಂಬಾತ ಹೈದರಾಬಾದ್‌ನಲ್ಲಿರುವ ತನ್ನ ಸಹೋದರಿ ಅನಿತಾ ಜತೆ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಚಾಟ್‌ ಮಾಡಿದ್ದ. ಈ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಯಿತು.

ಇಡೀ ಕುಟುಂಬ ಸದಸ್ಯರ ಮೇಲೆ ಕಣ್ಣಿಟ್ಟಿದ್ದ ಪೊಲೀಸರ ವಿಶೇಷ ತಂಡ, ಪ್ರೇಮ್‌ಕುಮಾರ್‌ನ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ತಾಂತ್ರಿಕ ತನಿಖೆಗೆ ಇಳಿದಿತ್ತು. ಅದರಂತೆ ತನಿಖೆ ಮುಂದುವರಿಸಿದಾಗ ಆರೋಪಿಗಳು ಮಹಾರಾಷ್ಟ್ರದ, ಪುಣೆ, ಸಾಂಗ್ಲಿ, ಸತಾರಾ ಮುಂತಾದ ಕಡೆ ಹೋಗಿ ಬಳಿಕ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವುದು ಪತ್ತೆಯಾಯಿತು. ಈ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪಾಲಬ್ರಹ್ಮಯ್ಯನ ಹತ್ಯೆಗೆ ಸ್ಕೇಚ್‌!: ಸುರೇಶ್‌ನನ್ನು ಹತ್ಯೆಗೈದ ಬಳಿಕ ಇದಕ್ಕೆ ಪ್ರತಿಯಾಗಿ ಪಾಲಬ್ರಹ್ಮಯ್ಯನನ್ನು ಹತ್ಯೆ ಮಾಡಲು ಸುರೇಶ್‌ನ ಪುತ್ರ ರವೀಂದ್ರಕುಮಾರ್‌ ಮತ್ತು ಸಹೋದರ ಸಾಯಿಕುಮಾರ್‌ ಸಂಚು ರೂಪಿಸುತ್ತಿದ್ದರು. ಅಷ್ಟರಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.