ಕರ್ನಾಟಕ

ರಾಹುಲ್‌ ಗಾಂಧಿ ಭೇಟಿ ಮಾಡಿದ ಎಂ.ಬಿ.ಪಾಟೀಲ್‌: 2ನೇ ಕಂತಿನ ಸಂಪುಟ ವಿಸ್ತರಣೆ ವೇಳೆ ಪ್ರಮುಖ ಖಾತೆ

Pinterest LinkedIn Tumblr


ಬೆಂಗಳೂರು: ಸಚಿವ ಸ್ಥಾನ ವಂಚಿತರಾಗಿ ತೀವ್ರ ಅಸಮಾಧಾನ ಹೊಂದಿರುವ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್‌ ಅವರು ಶನಿವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ನಾಲ್ಕು ಗೋಡೆಗಳ ಮಧ್ಯೆ ನಮ್ಮ ಮಾತುಕತೆ ನಡೆದಿದ್ದು, ರಾಹುಲ್‌ ಗಾಂಧಿ ಅವರಿಗೆ ಎಲ್ಲವನ್ನೂ ಹೇಳಿದ್ದೇನೆ. ಸಚಿವ ಸ್ಥಾನ ಕೈ ತಪ್ಪಲು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಕಾರಣ ಅಲ್ಲ. ರಾಹುಲ್‌ ಅವರ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಬಿಜೆಪಿಯ ಸಂಪರ್ಕದಲ್ಲಿ ನಾನಿಲ್ಲ. ನಾನು ಕಾಂಗ್ರೆಸ್‌ ಕಟ್ಟಾಳು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಡಿಸಿಎಂ ಇಲ್ಲ, ಪ್ರಮುಖ ಖಾತೆ ಖಚಿತ ?

ಮಾತುಕತೆ ವೇಳೆ 2ನೇ ಕಂತಿನ ಸಂಪುಟ ವಿಸ್ತರಣೆ ವೇಳೆ ಎಂ.ಬಿ.ಪಾಟೀಲ್‌ ಅವರಿಗೆ ಪ್ರಮುಖ ಖಾತೆ ನೀಡುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದ್ದು, ಯಾವುದೇ ಕಾರಣಕ್ಕೂ ಇನ್ನೊಂದು ಡಿಸಿಎಂ ಹುದ್ದೆ ಸೃಷ್ಟಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ವರದಿಯಾಗಿದೆ.

ದಿನೇಶ್‌ಗೆ ಕೆಪಿಪಿಸಿ ಅಧ್ಯಕ್ಷ ಗಿರಿ

ಸಚಿವ ಸ್ಥಾನ ವಂಚಿತರಾಗಿರುವ ದಿನೇಶ್‌ ಗುಂಡು ರಾವ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಜೂನ್‌ 14 ರ ಬಳಿಕ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.

ನನಗೆ ಗೊತ್ತಿಲ್ಲ

ಎಂ.ಬಿ.ಪಾಟೀಲ್‌ ಅವರ ರಾಹುಲ್‌ ಭೇಟಿ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಡಿಸಿಎಂ ಡಾ.ಜಿ.ಪರಮೇಶ್ವರ್‌ ರಾಹುಲ್‌ ಅವರು ಕರೆದು ಪಾಟೀಲ್‌ ತೆರಳಿದ್ದಾರಾ ಇಲ್ಲ ಅವರಾಗಿಯೇ ಹೋಗಿದ್ದಾರಾ ಎನ್ನುವುದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Comments are closed.