ಕರ್ನಾಟಕ

ಮದುವೆಯಾಗಿ ವಂಚಿಸುತ್ತಿದ್ದ ಯುವತಿ ಸೇರಿ ಮೂವರ ಬಂಧನ

Pinterest LinkedIn Tumblr


ಚಿತ್ರದುರ್ಗ: ಕೋಟೆ ಠಾಣೆಯ ಸಿಪಿಐ ಫೈಜುಲ್ಲಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮದುವೆಯನ್ನು ದಂಧೆಯಾಗಿಸಿಕೊಂಡು ವಂಚಿಸುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.

ಚಿತ್ರದುರ್ಗ ನಗರದ ಯುವಕ ಜಿತೇಶ್​ಗೆ ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಮೂಲದ ಯುವತಿ ಸ್ನೇಹಾ ಸೇರಿದಂತೆ ದಾವಣಗೆರೆಯ ಬ್ರೋಕರ್ ಫಾರಸ್ ಹಾಗೂ ಗಾಂಧಿಮಾ ಎಂಬುವವರನ್ನು ಬಂಧಿಸಲಾಗಿದೆ.

ಮೇ 11ರಂದು ಜಿತೇಶ್ ಜತೆ ಸ್ನೇಹಾ ವಿವಾಹವಾಗಿತ್ತು. ಮದುವೆ ಆಗುವ ಮುನ್ನ ಬಡತನದ ನೆಪ ಹೇಳಿ ವಧುದಕ್ಷಿಣೆ ರೂಪದಲ್ಲಿ 9 ಲಕ್ಷ ರೂ. ಹಣವನ್ನು ಸ್ನೇಹಾ ಪಡೆದಿದ್ದಳು. ಮದುವೆ ಆದ ಐದನೇ ದಿನಕ್ಕೆ ಅಂದರೆ ಮೇ 16ರಂದು ಲಕ್ಷಾಂತರ ಮೌಲ್ಯದ ಮಾಂಗಲ್ಯ ಸರದೊಂದಿಗೆ ಸ್ನೇಹಾ ನಾಪತ್ತೆಯಾಗಿದ್ದಳು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮಹಾರಾಷ್ಟ್ರದ ನಾಸಿಕ್​ನಲ್ಲಿರುವ ಸ್ನೇಹಾ ಮನೆಯಲ್ಲಿ ಮಾಂಗಲ್ಯ ಸರಗಳು ಹಾಗೂ ಪ್ಯಾನ್ ಕಾರ್ಡುಗಳು ಪತ್ತೆಯಾಗಿತ್ತು. ಮದುವೆ ಹೆಸರಲ್ಲಿ ಇತರರಿಗೂ ವಂಚಿಸಿದ ಬಗ್ಗೆ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ‌ ಕೈಗೊಂಡಿದ್ದಾರೆ.

Comments are closed.