ಕರ್ನಾಟಕ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: 4 ಮಂದಿ ಎಸ್‌ಐಟಿ ವಶಕ್ಕೆ

Pinterest LinkedIn Tumblr


ಬೆಂಗಳೂರು: 43 ಮೊಬೈಲ್‌ಗ‌ಳು, ಐದು ಡೈರಿಗಳು, ಎಡಪಂಥೀಯ ಚಿಂತಕರ ಹೆಸರುಗಳು, ಗೌರಿ ಲಂಕೇಶ್‌ ಮನೆಯ ಮಾರ್ಗದ ಸ್ಕೆಚ್‌, ಗೌರಿ ಮನೆಯ ನೀಲ ನಕ್ಷೆ, ಕೃತ್ಯದ ಮಾದರಿಯ ನೀಲನಕ್ಷೆ…

ಇದು ಮೈಸೂರಿನ ಸಾಹಿತಿ ಭಗವಾನ್‌ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಉಪ್ಪಾರಪೇಟೆ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಶಿಕಾರಿಪುರದ ಪ್ರವೀಣ್‌ ಅಲಿಯಾಸ್‌ ಸುಜಿತ್‌ ಕುಮಾರ್‌, ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌, ವಿಜಯಪುರದ ಮನೋಹರ್‌ ದುಂಡಪ್ಪ ಯವಡೆ ಬಳಿ ಪತ್ತೆಯಾದ ಮಹತ್ವದ ದಾಖಲೆಗಳು.

ಈ ಹಿನ್ನೆಲೆಯಲ್ಲಿ ಗುರುವಾರ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಾಡಿ ವಾರೆಂಟ್‌ ಸಲ್ಲಿಸಿ ನಾಲ್ವರು ಆರೋಪಿಗಳನ್ನು 11 ದಿನಗಳ ಕಾಲ ವಶಕ್ಕೆ ಪಡೆದಿದೆ.

ಮೇ 21ರಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದರು. ಇವರ ಬಳಿ ಐದು ಡೈರಿ ಸಿಕ್ಕಿದ್ದು, ಇದರಲ್ಲಿ ಕೆಲವೊಂದು ಕೋಡ್‌ವರ್ಡ್‌ಗಳು ಪತ್ತೆಯಾಗಿವೆ. ಕಿಂಗ್‌ಪಿನ್‌ ಸೂಚನೆಯಂತೆ ಗೌರಿ ಹತ್ಯೆ ಹೇಗೆ ಮಾಡಬೇಕು? ಎಲ್ಲಿಂದ ಹಿಂಬಾಲಿಸಬೇಕು? ಮನೆ ಬಳಿ ಹತ್ಯೆ ಮಾಡುವುದು ಹೇಗೆ? ಎಂಬುದೂ ಸೇರಿ ಇಡೀ ಕಾರ್ಯಾಚರಣೆಯ ಎಲ್ಲ ಸಂಚನ್ನು ಕೋಡ್‌ವರ್ಡ್‌ಗಳ ಮೂಲಕ ಬರೆದಿಡಲಾಗಿದೆ.

ಗೌರಿ ಮನೆ, ದಾರಿಯ ನೀಲನಕ್ಷೆ: ಆರೋಪಿಗಳ ಬಳಿ ಪತ್ತೆಯಾದ ಡೈರಿಯಲ್ಲಿ ಗೌರಿ ಲಂಕೇಶ್‌ ಮನೆಗೆ ಹೋಗುವ, ಬರುವ ನಾಲ್ಕು ದಿಕ್ಕುಗಳ ದಾರಿಗಳು, ಮನೆ ಮುಂಭಾಗ, ಹಿಂಭಾಗದ ಸಂಪೂರ್ಣ ನೀಲನಕ್ಷೆ. ಅಷ್ಟೇ ಅಲ್ಲದೆ, ವಿಚಾರವಾದಿ ಕೆ.ಎಸ್‌.ಭಗವಾನ್‌ ಸೇರಿ 10ಕ್ಕೂ ಅಧಿಕ ಮಂದಿ ಎಡಪಂಥಿಯ ಚಿಂತಕರು, ಪ್ರಗತಿಪರರ ಹೆಸರುಗಳನ್ನು ಬರೆದುಕೊಂಡಿದ್ದಾರೆ. ಇದರಲ್ಲಿ ಗೌರಿ ಲಂಕೇಶ್‌ ಹೆಸರು ಕೂಡ ಇದೆ. ಈಗಾಗಲೇ ಡೈರಿಯಲ್ಲಿರುವ ಗೌರಿ ಲಂಕೇಶರನ್ನು ಹತ್ಯೆಗೈದಿದ್ದು, ಇತರೆ ವಿಚಾರವಾದಿಗಳನ್ನು ಆರೋಪಿಗಳು ಕೊಲ್ಲಲು ಸಂಚು ರೂಪಿಸಿರುವ ಅನುಮಾನವಿದೆ.

ವಿಶೇಷ ತನಿಖಾ ತಂಡದ ವಶಕ್ಕೆ: ಈ ಕೃತ್ಯಗಳಿಗಾಗಿ ಆರೋಪಿಗಳು 43 ಮೊಬೈಲ್‌ಗ‌ಳು, 50ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳನ್ನು ಬಳಸಿದ್ದಾರೆ. ಈ ಸಿಮ್‌ಕಾರ್ಡ್‌ಗಳು ಅಮಾಯಕರ ಹೆಸರುಗಳಲ್ಲಿವೆ. ಆರೋಪಿಗಳು ನೆರೆ ರಾಜ್ಯದ ಕೆಲ ಸಂಘಟನಾ ಶಕ್ತಿಗಳ ಜತೆ ನಿಕಟ ಸಂಪರ್ಕ ಹೊಂದಿರುವ ಮಾಹಿತಿಯಿದ್ದು, ಮಹಾರಾಷ್ಟ್ರ, ಗೋವಾಕ್ಕೆ ಕರೆದೊಯ್ಯಬೇಕಿದೆ.

ಅಲ್ಲಿಯೇ ಹತ್ಯೆಗಳಿಗೆ ಸಂಚು ರೂಪಿಸಿರುವ ಅನುಮಾನವಿದೆ. ಹೀಗಾಗಿ ಆರೋಪಿಗಳನ್ನು ವಿಚಾರಣೆಗಾಗಿ 13 ದಿನಗಳ ವಶಕ್ಕೆ ನೀಡಬೇಕೆಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಮನವಿ ಮಾಡಿತು. ಇದನ್ನು ಪುರಸ್ಕರಿಸಿದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾ. ಜಗದೀಶ್‌ ಅವರು 11 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದರು.

ಹಿಂಸಿಸಿ ಹೇಳಿಕೆ ಪಡೆದಿದ್ದಾರೆ!: “ವಿಚಾರಣೆ ಹೆಸರಿನಲ್ಲಿ ಪೊಲೀಸರು ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಆರೋಪಿಗಳಾದ ಪ್ರವೀಣ್‌ ಹಾಗೂ ಮನೋಹರ್‌ ದುಂಡೆಪ್ಪ ಯವಡೆ ಆರೋಪಿಸಿದರು. ನಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹೊಡೆದು, ಬಲವಂತದಿಂದ ಹೇಳಿಕೆ ಪಡೆಯುತ್ತಿದ್ದಾರೆ ಎಂದು ಗಾಯದ ಗುರುತುಗಳನ್ನು ನ್ಯಾಯಾಧೀಶರಿಗೆ ತೋರಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ನ್ಯಾ. ಜಗದೀಶ್‌, ಯಾವುದೇ ಕಾರಣಕ್ಕೂ ದೈಹಿಕವಾಗಿ ಹಲ್ಲೆ ನಡೆಸಬಾರದೆಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಇನ್ನು ಆರೋಪಿಗಳನ್ನು ಈಗ ವಶಕ್ಕೆ ಪಡೆಯುತ್ತಿರುವುದು ಉಪ್ಪಾರಪೇಟೆ ಪ್ರಕರಣದಲ್ಲಲ್ಲ. ಗೌರಿ ಹತ್ಯೆ ಪ್ರಕರಣದಲ್ಲಿ. ಇದೇ ಮೊದಲ ಬಾರಿ ಎಸ್‌ಐಟಿಯವರು ನಿಮ್ಮನ್ನು ವಶಕ್ಕೆ ಪಡೆಯುತ್ತಿದ್ದು, ತನಿಖೆಗೆ ಸಹಕರಿಸಿ ಎಂದು ಆರೋಪಿಗಳಿಗೆ ಸೂಚಿಸಿದರು.

Comments are closed.