ಕರ್ನಾಟಕ

ಇನ್ನು 15 ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ! ರೈತರೊಂದಿಗೆ ಸಭೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಇನ್ನು 15 ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ನಂತರ ಈ ವಿಷಯ ಪ್ರಕಟಿಸಿದರು.

2009, ಏಪ್ರಿಲ್ 1ರಿಂದ 2017ರ ಡಿಸೆಂಬರ್ 31 ರವರೆಗೆ ರೈತರು ಮಾಡಿರುವ ಎಲ್ಲಾ ಬೆಳೆ ಸಾಲ‌ಮನ್ನಾ, ಶ್ರೀಮಂತ ರೈತರು, 3 ವರ್ಷದ ಆದಾಯ ತೆರಿಗೆ ಪಾವತಿಸಿರುವ ರೈತರು, ವ್ಯಾಪಾರದ ಜತೆಗೆ ಕೃಷಿ ಮಾಡುತ್ತಿರುವ ರೈತರ ಸಾಲ ಮನ್ನಾ ಮಾಡಬೇಕೆ, ಕೃಷಿಯೇತರ ಉದ್ದೇಶಕ್ಕೆ ಮಾಡಿರುವ ಸಾಲ ಮನ್ನಾ ಮಾಡಬೇಕೆ ಎಂಬ ಬಗ್ಗೆ ಚರ್ಚಿಸಲಿದ್ದೇವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಲಹೆಯನ್ನೂ ಪಡೆಯಬೇಕಿದ್ದು, ಇನ್ನು 15 ದಿನದೊಳಗೆ ಸೂಕ್ತ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

‘ರಾಜ್ಯದ ಬಜೆಟ್‌ ₹2 ಲಕ್ಷ ಕೋಟಿ. ಇದರಲ್ಲಿಯೇ ಸಾಲಮನ್ನಾ ಮಾಡಿ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳ ಯೋಜನೆಗಳಿಗೂ ಅನುದಾನ ನೀಡಬೇಕಿದೆ’ ಎಂದರು.

ರೈತರು ಹಲವು ಕೆಲಸಗಳಿಗೆ ಸಂಬಂಧಪಟ್ಟಂತೆ ಸಾಲ ಪಡೆದುಕೊಂಡಿದ್ದಾರೆ. ಅವರ ಸಾಲವನ್ನು ಮನ್ನಾ ಮಾಡುವ ಬಗ್ಗೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ರೈತಮುಖಂಡರು, ಕೃಷಿ ತಜ್ಞರ ಜೊತೆ ಚರ್ಚೆ ನಡೆಸಿ ಇನ್ನು 10-15 ದಿನಗಳಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇನ್ನೆರಡು ದಿನಗಳಲ್ಲಿ ದೆಹಲಿಗೆ ವಾಪಸ್ಸಾಗುತ್ತಾರೆ. ಅವರ ಜೊತೆ ಕೂಡ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದರು.

ಈಗಾಗಲೇ ಕೆಲವು ರಾಜ್ಯಗಳು ಸಾಲ ಮನ್ನಾ ಮಾಡಿದ್ದು, ಆ ಬಗ್ಗೆಯೂ ಮಾಹಿತಿ ತೆಗೆದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ರೈತರು ಸಲಹೆ ನೀಡಬೇಕು, ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸಿಎಂ ತಿಳಿಸಿದರು.

‘ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ನಡೆಯುತ್ತೇವೆ, ಹಿಂದೆ ಸರಿಯುವ ಮಾತಿಲ್ಲ. ಡಿಸಿಎಂ ಪರಮೇಶ್ವರ ಮತ್ತು ನಾನು ಇಬ್ಬರೂ ಈ ಕುರಿತು ಚರ್ಚಿಸಿದ್ದೇವೆ’ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ನಗರ ಪ್ರದೇಶದ ಅಭಿವೃದ್ಧಿಯ ಹಣವನ್ನು ರೈತರ ಸಾಲ ಮನ್ನಾಗಾಗಿ ಬಳಕೆಯಾಗಲಿದೆ. ಅದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬುದು ಸರಿಯಲ್ಲ. ಖಜಾನೆಯೂ ಭದ್ರವಾಗಿರಲಿದೆ ಹಾಗೂ ರೈತರ ಸಾಲ ಮನ್ನಾ ಕೂಡ ಆಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಬಿಜೆಪಿ ಶಾಸಕ ಗೋವಿಂದ ಕಾರಜೋಳ, ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿ ಅನೇಕ ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದರು.

Comments are closed.