ಕರ್ನಾಟಕ

ರಾಜ್ಯದಲ್ಲಿ ಮಕ್ಕಳ ಕಳ್ಳರ ಕುರಿತು ಸುಳ್ಳು ವದಂತಿಗೆ ತಿಂಗಳಲ್ಲಿ 90 ಜನರ ಮೇಲೆ ಹಲ್ಲೆ!

Pinterest LinkedIn Tumblr


ಬೆಂಗಳೂರು: ಕರ್ನಾಟಕದಲ್ಲಿ ಮಕ್ಕಳ ಕಳ್ಳರು ಇದ್ದಾರೆ ಎಂಬ ವದಂತಿ ಸುಳ್ಳು ಎಂದು ಪೊಲೀಸರು ಜನರಿಗೆ ತಿಳಿ ಹೇಳುತ್ತಿದ್ದರೂ ರಾಜ್ಯದ ಜನತೆಗೆ ಮಾತ್ರ ಇನ್ನೂ ತಿಳುವಳಿಕೆ ಬಂದಿಲ್ಲ ಅನಿಸುತ್ತೆ. ಹೀಗಾಗಿ ಕೇವಲ ಅನುಮಾನದ ಮೇರೆಗೆ ಕಳೆದ 25 ದಿನಗಳಲ್ಲಿ 90 ಮಂದಿಯ ಮೇಲೆ ಉದ್ರಿಕ್ತರ ಗುಂಪು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರ ವಿಡಿಯೋವೊಂದು ಹರಿದಾಡುತ್ತಿದ್ದು, ಇದು ಸುಳ್ಳು ಎಂದು ಪೊಲೀಸರು ಜನರಿಗೆ ತಿಳುವಳಿಕೆ ಹೇಳುತ್ತಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ಬೇರೆಯವರಿಗೆ ಶೇರ್ ಮಾಡಬೇಡಿ ಎಂದು ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಕೂಡ, ಕಳೆದ 25 ದಿನಗಳಲ್ಲಿ ರಾಜ್ಯದ ಹಲವೆಡೆ 90 ಮಂದಿ ಅಮಾಯಕರ ಮೇಲೆ ಉದ್ರಿಕ್ತರು ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇತ್ತೀಚೆಗಷ್ಟೇ, ಬೆಂಗಳೂರಿನಲ್ಲಿ 26 ವರ್ಷದ ಯುವಕನನ್ನು ಉದ್ರಿಕ್ತರ ಗುಂಪು ಹೊಡೆದು ಕೊಂದು ಹಾಕಿತ್ತು.

ಶುಕ್ರವಾರದಂದು ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಮೂವರು ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳನ್ನು ಉದ್ರಿಕ್ತರ ಗುಂಪು ಮಕ್ಕಳ ಕಳ್ಳರು ಎಂದು ವಶಕ್ಕೆ ಪಡೆದಿದ್ದರು. ಬಳಿಕ, ಸ್ಥಳಕ್ಕೆ ಪೊಲೀಸರು ಬಂದು ಅವರನ್ನು ರಕ್ಷಿಸಿದ್ದು, ಉದ್ರಿಕ್ತರ ವಿರುದ್ಧ ಕೇಸ್ ದಾಖಲಿಸಿದೆ. ಇದೇ ರೀತಿ, ನಗರದ ಪುಲಿಕೇಶಿನಗರ, ಶಿವಾಜಿನಗರ ಹಾಗೂ ಭಾರತೀ ನಗರದಲ್ಲೂ ಗುರುವಾರ ಹಾಗೂ ಶುಕ್ರವಾರ ಹಲವು ಘಟನೆಗಳು ನಡೆದಿವೆ. ಪೊಲೀಸರು ಮೂವರು ಮಹಿಳೆಯರು ಸೇರಿದಂತೆ 12 ಮಂದಿಯನ್ನು ರಕ್ಷಿಸಿದ್ದಾರೆ. ಅಲ್ಲದೆ, ಉದ್ರಿಕ್ತರ ಗುಂಪಿನ ಮೇಲೆ 2 ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಗುರುವಾರ ರಾತ್ರಿ ಕಾಟನ್‌ಪೇಟೆಯಲ್ಲಿ ನಾಲ್ವರು ಭಿಕ್ಷುಕರನ್ನು ಥಳಿಸಿದ ಆರೋಪದ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ. ಒಟ್ಟಾರೆ, ಪೊಲೀಸರು 72 ಕೇಸುಗಳನ್ನು ದಾಖಲಿಸಿದ್ದು 46 ಜನರನ್ನು ಬಂಧಿಸಲಾಗಿದೆ. ಈ ಪೈಕಿ, ಬೆಂಗಳೂರಿನಲ್ಲಿ ವ್ಯಕ್ತಿಯನ್ನು ಹೊಡೆದು ಕೊಂದ ಆರೋಪದ ಮೇರೆಗೆ 16 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ, ಕೊಲೆ ಯತ್ನ ಸೇರಿ ಹಲವು ಐಪಿಸಿ ಸೆಕ್ಷನ್‌ಗಳ ಆಧಾರದ ಮೇಲೆ ಉದ್ರಿಕ್ತರ ವಿರುದ್ಧ ಕೇಸ್ ದಾಖಲಾಗಿದೆ. ಪ್ರಮುಖವಾಗಿ ಭಿಕ್ಷುಕರು, ಅಲೆಮಾರಿಗಳು, ಚಿಂದಿ ಹಾಯುವವರು, ದಿನಗೂಲಿ ನೌಕರರು ಹಾಗೂ ಸ್ಥಳೀಯ ಭಾಷೆ ಮಾತನಾಡಲು ಬರದವರ ಮೇಲೆ ಅನುಮಾನಗೊಂಡು ಜನತೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರೀತಿ ಮಕ್ಕಳ ಕಳ್ಳತನವಾಗುತ್ತಿಲ್ಲ ಎಂದು ರಾಜ್ಯದ ಹಲವು ಜಿಲ್ಲೆಗಳ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಡಿಜಿಐಜಿಪಿ ಸಹ ಗುರುವಾರ ಸ್ಪಷ್ಟನೆ ನೀಡಿದ್ದು, ಗಾಬರಿಯಾಗದಂತೆ ಜನತೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಆದರೂ ಕೂಡ ಮಕ್ಕಳ ಸಹಾಯವಾಣಿ 1098ಗೆ ದೂರವಾಣಿ ಕರೆಗಳು ಹೆಚ್ಚು ಬರುತ್ತಿದ್ದು, ತಾವು ವಾಸ ಮಾಡುತ್ತಿರುವ ಪ್ರದೇಶಗಳಲ್ಲೂ ಮಕ್ಕಳ ಕಳ್ಳರು ಇದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಸುಮಾರು 150 ದೂರವಾಣಿ ಕರೆಗಳು ಈ ವಿಚಾರವಾಗಿಯೇ ಬರುತ್ತಿವೆ ಎಂದು ತಿಳಿದುಬಂದಿದೆ. ಜನರಲ್ಲಿ ನಾವು ಸಾಕಷ್ಟು ತಿಳುವಳಿಕೆ ನೀಡುತ್ತಿದ್ದರೂ, ಈ ವಿಡಿಯೋವನ್ನು ಜನತೆ ನಂಬುತ್ತಿದ್ದಾರೆ. ಹಾಗೆ, ಇತರರಿಗೆ ಶೇರ್ ಮಾಡುತ್ತಿದ್ದಾರೆ. ಇನ್ನು, ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿ ಹಲವು ಪೊಲೀಸರ ತಂಡ ಜನವಸತಿ ಪ್ರದೇಶಗಳಿಗೆ ತೆರಳಿ ವದಂತಿಗಳನ್ನು ನಂಬದಂತೆ ಹಾಗೂ ಇತರರಿಗೆ ಸುಳ್ಳು ಮಾಹಿತಿ ನೀಡದಂತೆ ಜನರಲ್ಲಿ ಮನವರಿಕೆ ನೀಡುತ್ತಿದ್ದಾರೆ. ಬಳ್ಳಾರಿ, ರಾಯಚೂರು, ಕಲಬುರಗಿ, ಕೊಪ್ಪಳ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದೇಶದ ಐಟಿ ರಾಜಧಾನಿ ಬೆಂಗಳೂರಿನ ಜನತೆ ಸಹ ಈ ವದಂತಿಗಳನ್ನು ನಂಬುತ್ತಿದ್ದು, ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.