ಕರ್ನಾಟಕ

ವಿಶ್ವಾಸಮತ ಗೆದ್ದ ದೋಸ್ತಿ ಸರಕಾರ ! ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ ಜೆಡಿಎಸ್‌, ಕಾಂಗ್ರೆಸ್‌ನ ಬೆಂಬಲದೊಂದಿಗೆ ‘ಮೈತ್ತಿ’ ಸರ್ಕಾರ ರಚಿಸಿ, ಮುಖ್ಯಮಂತ್ರಿಯಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿದರು.

ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಭಾಷಣ ಮಾಡಿದ ನಂತರ ಬಿಜೆಪಿ ಸದಸ್ಯರೆಲ್ಲರೂ ಸಭಾತ್ಯಾಗ ಮಾಡಿದರು. ನಂತರ ಸ್ಪೀಕರ್ ಕೆ.ಆರ್‌. ರಮೇಶ್‌ ಕುಮಾರ್‌ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭಿಸಿದರು. ಸರಕಾರದ ಪರ ಯಾರು ಯಾರು ಇದ್ದಾರೆಂದು ಕೇಳಿದಾಗ ಸದನದಲ್ಲಿದ್ದ ಎಲ್ಲ ಕಾಂಗ್ರೆಸ್‌ ಶಾಸಕರು ಕೈ ಎತ್ತಿದರು. ಇದರೊಂದಿಗೆ ಎಚ್‌.ಡಿ. ಕುಮಾರಸ್ವಾಮಿ ಅನಾಯಾಸವಾಗಿ ವಿಶ್ವಾಸ ಮತ ಯಾಚನೆ ಪರೀಕ್ಷೆಯಲ್ಲಿ ಜಯ ಸಾಧಿಸಿದರು.

ವಿಶ್ವಾಸ ಮತ ಯಾಚನೆ ಯಶಸ್ವಿಯಾಗುತ್ತಿದ್ದಂತೆ ಶಾಸಕರೆಲ್ಲರೂ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರನ್ನು ಅಭಿನಂದಿಸಿದರು.

ನಂತರ ಕಲಾಪವನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅನಿರ್ದಿಷ್ಟಾವಧಿಯವರೆಗೂ ಮುಂದೂಡಿದರು.

ಕಾಂಗ್ರೆಸ್‌-ಜೆಡಿಎಸ್‌ ನಡುವಣ ಅವಕಾಶವಾದಿ ಮೈತ್ರಿಯ ಬಗ್ಗೆ ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ತೀಕ್ಷ್ಣ ವಾಗ್ದಾಳಿ ನಡೆಸಿದರು. ರೈತರ ಸಾಲ ಮನ್ನಾ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ಪ್ರಕಟಿಸದಿದ್ದರೆ ಸೋಮವಾರ ರಾಜ್ಯಾದ್ಯಂತ ಸ್ವಯಂಪ್ರೇರಿತ ಬಂದ್‌ ಆಚರಿಸಲಾಗುವುದು ಎಂದು ಸದನದಲ್ಲಿ ಎಚ್ಚರಿಕೆ ನೀಡಿದರು.

ಸುಮಾರು ಅರ್ಧ ಗಂಟೆ ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಬಳಿಕ ಸದನದಿಂದ ಹೊರನಡೆಯುತ್ತಿರುವುದಾಗಿ ಘೋಷಿಸಿ ವಾಕೌಟ್‌ ಮಾಡಿದರು. ಅವರ ಜತೆಗೆ ಬಿಜೆಪಿ ಶಾಸಕರೆಲ್ಲ ಸಭಾತ್ಯಾಗ ಮಾಡಿದರು.

ಬಿಎಸ್‌ವೈ ಪ್ರತಿಪಕ್ಷ ನಾಯಕ:
ಪ್ರತಿಪಕ್ಷ ನಾಯಕರಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಅವರಿಗೆ ವಿಧಾನಸಭೆ ಮಾನ್ಯತೆ ನೀಡಿದೆ. ಹೊಸದಾಗಿ ಚುನಾಯಿತರಾದ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಯಡಿಯೂರಪ್ಪ ಅವರ ಆಯ್ಕೆಯನ್ನು ಘೋಷಿಸಿದರು. ಗೋವಿಂದ ಕಾರಜೋಳ ಅವರು ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕನಾಗಿರುತ್ತಾರೆ.

ಸ್ಪೀಕರ್‌ ಆಗಿ ರಮೇಶ್‌ ಕುಮಾರ್‌ ಅವಿರೋಧ ಆಯ್ಕೆ:
ವಿಧಾನಸಭೆಯ ಸ್ಪೀಕರ್‌ ಆಗಿ ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್‌ ಕುಮಾರ್‌ ಅವಿರೋಧ ಆಯ್ಕೆಯಾಗಿದ್ದಾರೆ. ಸ್ಪೀಕರ್‌ ಹುದ್ದೆಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಸುರೇಶ್‌ ಕುಮಾರ್‌ ಕೊನೇ ಕ್ಷಣದಲ್ಲಿ ನಾಮಪತ್ರ ವಾಪಸ್‌ ಪಡೆದುಕೊಂಡು ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಟ್ಟರು.

ಸ್ಪೀಕರ್‌ ಆಯ್ಕೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಅವಿರೋಧ ಆಯ್ಕೆಗೆ ಸಹಕರಿಸಿದ ಪ್ರತಿಪಕ್ಷ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಮಾತನಾಡಿ, ರಮೇಶ್‌ ಕುಮಾರ್‌ ಅವರಂತಹ ಹಿರಿಯ ಅನುಭವಿಗಳ ಮಾರ್ಗದರ್ಶನ ಸದನಕ್ಕೆ ಅಗತ್ಯವಿದೆ ಎಂದರು. ಸಭಾಧ್ಯಕ್ಷರ ಅವಿರೋಧ ಆಯ್ಕೆ ಸತ್ಸಂಪ್ರದಾಯವಾಗಿದ್ದು, ಅದರ ಪಾಲನೆಗಾಗಿ ನಮ್ಮ ಅಭ್ಯರ್ಥಿ ನಾಮಪತ್ರವನ್ನು ವಾಪಸ್‌ ಪಡೆಯಲಾಗಿದೆ ಎಂದ ಯಡಿಯೂರಪ್ಪ, ನೂತನ ಸ್ಪೀಕರ್‌ಗೆ ಅವರು ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಕೂಡ ಸಭಾಧ್ಯಕ್ಷರ ಹುದ್ದೆ ಪಕ್ಷಾತೀತವಾದುದು. ಈ ಗೌರವಯುತ ಹುದ್ದೆಗೆ ಅವಿರೋಧ ಆಯ್ಕೆ ನಡೆಯುವುದು ಸತ್ಸಂಪ್ರದಾಯ. ಈ ಬಾರಿಯೂ ಅದು ಪಾಲನೆಯಾಗಿರುವುದಕ್ಕೆ ಸಂತಸವಾಗಿದೆ ಎಂದು ನುಡಿದರು.

Comments are closed.