ಕರಾವಳಿ

‘ಐ ಆಮ್ ಸೇವಿಂಗ್ ಮೈ ಬೀಚ್’- ವಿಶ್ವ ಪರಿಸರ ದಿನಾಚರಣೆಗೆ ಉಡುಪಿ ಜಿಲ್ಲಾಡಳಿತದ ಸಖತ್ ಫ್ಲಾನ್!

Pinterest LinkedIn Tumblr

ಉಡುಪಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 2,3,4 ಮತ್ತು 5ರಂದು ಜಿಲ್ಲೆಯ ಪಡುಬಿದ್ರೆ, ಕಾಪು, ಮಲ್ಪೆ ಮತ್ತು ತ್ರಾಸಿ ಮರವಂತೆಯಲ್ಲಿ ಪ್ರವಾಸೋದ್ಯಮ ಇಲಾಖೆ ಇತರ ಇಲಾಖೆಗಳ ಸಹಯೋಗದೊಂದಿಗೆ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲು ಅಪರ ಜಿಲ್ಲಾಧಿಕಾರಿ ಅನುರಾಧ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಜೂನ್ 2 ರಂದು ಪಡುಬಿದ್ರೆಯಲ್ಲಿ ಬೆಳಗ್ಗೆ 7 ಗಂಟೆಗೆ ಬೀಚ್ ಸ್ವಚ್ಛತೆಯೊಂದಿಗೆ ಆರಂಭವಾಗುವ ಕಾರ್ಯಕ್ರಮ ಸ್ಥಳೀಯರ ಸಹಕಾರದೊಂದಿಗೆ ವಿದ್ಯಾರ್ಥಿ ಸಮುದಾಯವನ್ನು ಒಳಗೊಂಡು ಪರಿಸರದ ಮೇಲೆ ಪ್ಲಾಸ್ಟಿಕ್ ಬೀರುವ ಹಾನಿಗಳ ಬಗ್ಗೆ, ಸಾಗರ ಸಂರಕ್ಷಣೆಯ ಅಗತ್ಯ, ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಮಾಹಿತಿ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.

ಬೀಚ್ ನಿರ್ವಹಣ ಸಮಿತಿಗೆ ಹೆಚ್ಚಿನ ಹೊಣೆಯನ್ನು ನೀಡಲಾಗಿದ್ದು, ಸಮಿತಿಗಳು ಕಾರ್ಯಕ್ರಮದ ಬಗ್ಗೆ ಸ್ಥಳೀಯರ ಪಾಲ್ಗೊಳ್ಳುವಿಕೆ ಹಾಗೂ ಪ್ರಚಾರವನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

ಈಗಾಗಲೇ ಜಿಲ್ಲೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದು, ಸ್ಥಳೀಯ ಎಸ್ ಎಲ್ ಆರ್ ಎಂ ಘಟಕ ಹಾಗೂ ಪಂಚಾಯತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಸ್ವಚ್ಛತೆ ಇನ್ನಷ್ಟು ಪರಿಣಾಮಕಾರಿಯಾಗಲಿದ ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು.

ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಲಕ್ಷ್ಮೀಕಾಂತ್ ಅವರು, ಜೂನ್ 5ರಂದು ತ್ರಾಸಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಭೆಗೆ ವಿವರಿಸಿದರು. ಸುಮಾರು 600 ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಳ್ಳಲಿರುವರು. ಇಲ್ಲಿನ ತ್ರಾಸಿ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಪರಿಸರ ಸಂಬಂಧಿ ಸ್ಪರ್ಧೆಗಳ ಬಹುಮಾನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಅನಿತ ಮಾತನಾಡಿ, ಇಲಾಖೆ ಪರಿಸರ ದಿನಾಚರಣೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತ ಜೆ ಸಿ ಜನಾರ್ಧನ್, ವಿದ್ಯಾಂಗ ಇಲಾಖೆ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಸಚಿನ್, ಕಾಪು ಬೀಚ್ ನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ, ಮಲ್ಪೆ, ತ್ರಾಸಿ, ಮರವಂತೆಯ ಬೀಚ್ ನಿರ್ವಹಣಾಧಿಕಾರಿ ಸುದೇಶ್ ಶೆಟ್ಟಿ, ಪಡುಬಿದ್ರೆಯ ಪ್ರತಿನಿಧಿ ಸಭೆಯಲ್ಲಿ ಪಾಲ್ಗೊಂಡರು.

Comments are closed.