ಕರ್ನಾಟಕ

ದೇವರಿಗೆ ಹಿಗ್ಗಮುಗ್ಗಾ ಬೈದು, ಕಂಡ ಕಂಡವರನ್ನೂ ನಿಂದಿಸುವ ಕುಂಡೆ ಹಬ್ಬ ಆರಂಭ

Pinterest LinkedIn Tumblr


ಮಡಿಕೇರಿ: ದೇವರಿಗೆ ಹಿಗ್ಗಮುಗ್ಗಾ ಬೈದು, ಕಂಡ ಕಂಡವರನ್ನೂ ನಿಂದಿಸಿ ಅವರಿಂದ ಹಣ ಸಂಗ್ರಹಿಸಿ ಬಳಿಕ ದೇವರೇ ಕ್ಷಮಿಸಿ ಬಿಡಪ್ಪಾ ಎಂದು ಅಡ್ಡಬಿದ್ದು ಎಲ್ಲವನ್ನೂ ಮರೆತು ಬಿಡುವ ಬುಡಕಟ್ಟು ಜನರ ವಿಶಿಷ್ಟವಾದ ಕುಂಡೆ ಹಬ್ಬಕ್ಕೆ  ಚಾಲನೆ ದೊರೆಯಿತು.

ದಕ್ಷಿಣ ಕೊಡಗಿನಲ್ಲಿ ಬುಡಕಟ್ಟು ಜನರು ವಿಚಿತ್ರ ವೇಷಭೂಷಣಗಳೊಂದಿಗೆ ತಂಡ ತಂಡವಾಗಿ ಹಲವು ಭಾಗಗಳಿಗೆ ತೆರಳಿ ಕುಣಿಯುತ್ತಾ, ದೇವರನ್ನು ಬಯ್ಯುತ್ತಾ ಹಣ ಸಂಗ್ರಹಿಸುತ್ತಾರೆ. ಆದರೆ, ನಿಜವಾದ ಹಬ್ಬ ನಡೆಯುವುದು ಗುರುವಾರ. ಅಂದು ಬೇರೆ ಬೇರೆ ಕಡೆಗಳಿಗೆ ತೆರಳಿದ ಎಲ್ಲಾ ತಂಡಗಳು ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಸೇರುತ್ತಾರೆ. ನೂರಾರು ಮಂದಿ ಒಂದೆಡೆ ವಿಚಿತ್ರ ವೇಷ ಹಾಕಿಕೊಂಡು, ಮೈಗೆ ಬಣ್ಣ ಬಳಿದುಕೊಂಡು, ಟಿನ್ನ್‌, ಡ್ರಮ್‌ ಸೇರಿದಂತೆ ಕೈಗೆ ಸಿಕ್ಕದ ವಸ್ತುಗಳಲ್ಲಿ ತಾಳ ಹಾಕುತ್ತಾ ”ಕುಂಡೆ ಕುಂಡೆ ಕುಹೂ ಕುಹೂ” ಎಂದು ಬಯ್ಯುತ್ತಾ ಸಾಗುತ್ತಾರೆ.

ಕೊಡಗಿನ ಕಾಫಿ ತೋಟ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಮಾಡುವ ಬುಡಕಟ್ಟು ಮಂದಿ ಮೇ 24 ರಂದು ದೇವರಪುರದಲ್ಲಿ ಸೇರುತ್ತಾರೆ. ಬುಧವಾರ ಕೆಲವರು ಪೊನ್ನಂಪೇಟೆ, ಸಿದ್ದಾಪುರ, ಕುಶಾಲನಗರ ಸೇರಿದಂತೆ ಕೆಲವು ಕಡೆಗಳಿಗೆ ತೆರಳಿ ಕುಣಿಯುತ್ತಾ, ದೇವರನ್ನು, ಮನುಷ್ಯರನ್ನು ಬಯ್ಯುತ್ತಾ ಸಾಗಿದರು. ದಾರಿ ನಡುವೆ ಸಿಗುವವರಿಂದ ಹಣ ವಸೂಲಿ ಮಾಡಿದರು. ಇವರು ಬೈದರೆ ಈ ಎರಡು ದಿನ ಯಾರೂ ಸಿಟ್ಟು ಮಾಡಿಕೊಳ್ಳುವುದಿಲ್ಲ.

ಕೆಲವು ವರ್ಷಗಳಿಂದ ಕುಂಡೆ ಹಬ್ಬ ಹಾದಿ ತಪ್ಪುತ್ತಿದ್ದು, ಹೆಂಡ ಕುಡಿದು ಕಂಡ ಕಂಡವರಿಂದ ಹಣ ವಸೂಲಿ ಹಾಗೂ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವೊಂದು ನಿಯಂತ್ರಣವನ್ನು ಹೇರಿದೆ. ಗೋಣಿಕೊಪ್ಪ ವಿಭಾಗದಲ್ಲಿ ಮದ್ಯ ನಿಷೇಧಿಸಲಾಗಿದೆ. ಅಲ್ಲದೆ, ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಬಲತ್ಕಾರವಾಗಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದೆ.

ಮೇ 24 ರಂದು ಈ ಹಬ್ಬವನ್ನು ದೇವರಪುರದಲ್ಲಿ ನೋಡಲು ಸಾವಿರಾರು ಮಂದಿ ಸೇರುತ್ತಾರೆ.

Comments are closed.