ಕರಾವಳಿ

ಜೂನ್ 7 : ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತುಳು ಭಾಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ

Pinterest LinkedIn Tumblr

ಮಂಗಳೂರು ಮೇ. 24 : 2018ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತುಳು ಪಠ್ಯ ಆಯ್ಕೆ ಮಾಡಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ ನೂರು ಫಲಿತಾಂಶ ದಾಖಲಿಸಿರುವುದು ತುಳು ಕಲಿಕೆಗೆ ಪ್ರೋತ್ಸಾಹದಾಯಕವಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತುಳು ಭಾಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಜೂನ್ 7 ರಂದು ನಡೆಯಲಿದೆ.

ಪರೀಕ್ಷೆ ಬರೆದ ಒಟ್ಟು 417 ವಿದ್ಯಾರ್ಥಿಗಳು ಕೂಡಾ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ಬಹುಪಾಲು ವಿದ್ಯಾರ್ಥಿಗಳು ಪುತ್ತೂರು ತಾಲೂಕಿನವರಾದ ಕಾರಣ ಅಭಿನಂದನಾ ಸಮಾರಂಭವನ್ನು ಪೂತ್ತೂರು ತಾಲೂಕು ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

2017-18ರ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 35 ಶಾಲೆಗಳಲ್ಲಿ ತುಳು ಪಠ್ಯ ಯೋಜನೆ ಅನುಷ್ಠಾನಗೊಳಿಸಿದ್ದು ಈ ಪೈಕಿ 22 ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಗಳ ಮುಖ್ಯಸ್ಥರು, ತುಳು ಸಂಘಟನೆಗಳ ಪ್ರಮುಖರು, ಅಕಾಡೆಮಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತುಳು ಪಠ್ಯವನ್ನು ಅನುಷ್ಠಾನಗೊಳಿಸಿರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು, ಹೆತ್ತವರು ತುಳು ಭಾಷಾ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ತಿಳಿಸಿದ್ದಾರೆ.

Comments are closed.