ಕರ್ನಾಟಕ

ದೇವರು, ಕನ್ನಡ ನಾಡಿನ ಜನತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ; ರಾಜ್ಯದ 25ನೇ ಮುಖ್ಯಮಂತ್ರಿ: ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ

Pinterest LinkedIn Tumblr

ಬೆಂಗಳೂರು; ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಚುಕ್ಕಾಣಿ ಹಿಡಿದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಬುಧವಾರ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಕಾಂಗ್ರೆಸ್ ಪಾಳಯದಿಂದ ಆ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಕೂಡ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಅದ್ಧೂರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರಿಗೆ ರಾಜ್ಯಪಾಲ ವಜುಭಾಯ್ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ರೈತರು ಹಾಗೂ ದೇವರ ಹಾಗೂ ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹೆಚ್.ಡಿ.ಕೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ರಾಜ್ಯದಲ್ಲಿ 15ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದಿದೆ.

2006ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದು ಬಿಜೆಪಿ ಜೊತೆಗೆ ಕೈಜೋಡಿಸಿ ಹೊಸ ಸರ್ಕಾರ ರಚಿಸುವ ಮೂಲಕ ಕುಮಾರಸ್ವಾಮಿಯವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಮೊದಲ ಬಾರಿ ಶಾಸಕರಾಗಿದ್ದರು. ಹೀಗೆ ಚೊಚ್ಚಲ ಬಾರಿಗೆ ಶಾಸಕರಾಗಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಅವರ ಪಾಲಾಗಿತ್ತು.

ಈಗಲೂ ಒಂದು ರೀತಿಯ ಕ್ಷಿಪ್ರ ರಾಜಕೀಯ ಬೆಳವಣಿಗೆ ರೀತಿಯಲ್ಲಿಯೇ ಕಾಂಗ್ರೆಸ್ ಜೊತೆಗೆ ಕೈಜೋಡಿಸಿರುವ ಕುಮಾರಸ್ವಾಮಿಯವರು ಸರ್ಕಾರ ರಚನೆ ಮಾಡಿದ್ದಾರೆ.

ಸಹಸ್ರಾರು ಸಂಖ್ಯೆ ಜನರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಕುಮಾರಸ್ವಾಮಿಯವರು ಮೇ.25ರಂದು ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಅದೇ ದಿನ ವಿಧಾನಸಭೆಯ ನೂತನ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಆಯ್ಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ವಿಶ್ವಾಸಮತ ಯಾಚನೆ ಮಾಡಲು ಉದ್ದೇಶಿಸಲಾಗಿತ್ತು.

ಮುಂಜಾನೆಯಿಂದಲೂ ನಗರದಲ್ಲಿ ಮಳೆ ಸುರಿಯುತ್ತಲೇ ಇತ್ತು. ನೆಚ್ಚಿನ ನಾಯಕನ ಅಧಿಕಾರ ಸ್ವೀಕಾರ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಾಂತರ ಜನರಿಗೆ ಮಳೆಹನಿಗಳ ಸಿಂಚನವೂ ಉತ್ಸಾಹ ಹೆಚ್ಚಿಸಿತು.

ಜೆ.ಪಿ.ನಗರದಿಂದ ವಿಧಾನಸೌಧದತ್ತ ಹೊರಟ ಕುಮಾರಸ್ವಾಮಿ ಮಳೆಯನ್ನು ಸ್ವಾಗತಿಸಿದ್ದರು. ‘ದೇವರ ಆಶೀರ್ವಾದ ನಮಗಿದೆ. ನಾಡಿನಲ್ಲಿ ಮುಂದೆ ಒಳ್ಳೆಯದು ಆಗಲಿದೆ ಎಂಬುದರ ಸೂಚಕ ಇದು’ ಎಂದು ಖುಷಿ ತುಳುಕಿಸುತ್ತಲೇ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಜೊತೆಗೂಡಿ ಕಾರು ಹತ್ತಿದ್ದರು. ದೇವೇಗೌಡರು ಪತ್ನಿ ಚೆನ್ನಮ್ಮ ಮತ್ತು ಕುಟುಂಬದ ಇತರ ಸದಸ್ಯರ ಜೊತೆಗೂಡಿ ವಿಧಾನಸೌಧಕ್ಕೆ ಬಂದರು.

ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ನಗುನಗುತ್ತಾ ದೇವೇಗೌಡರನ್ನು ಎದುರುಗೊಂಡು ಮಾತನಾಡಿದ್ದು ಎದ್ದು ಕಂಡಿತು. ತಮ್ಮತಮ್ಮ ರಾಜ್ಯಗಳಲ್ಲಿ ಬದ್ಧ ವೈರಿಗಳಾಗಿರುವ ಅನೇಕರು ವಿಧಾನಸೌಧದ ಎದುರು ಕೈಕುಲುಕಿ ಬಿಜೆಪಿ ವಿರುದ್ಧ ಮಹಾಮೈತ್ರಿಯ ಸ್ಪಷ್ಟ ಮುನ್ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶರದ್‌ ಯಾದವ್‌, ಗುಲಾಬ್‌ ನಬೀ ಅಜಾದ್‌, ಚಂದ್ರಬಾಬು ನಾಯ್ಡು, ಸೀತಾರಾಂ ಯೆಚೂರಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು.

ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ‘ಅಧಿಕಾರ ಸೂತ್ರ’ ಕೈಗೆತ್ತಿಗೊಳ್ಳುವ ಸಂಭ್ರಮಕ್ಕೆ ದೇಶದ ತೃತೀಯ ರಂಗ ಸಾಕ್ಷಿಯಾಯಿತು.

Comments are closed.