ಕರಾವಳಿ

ಮಂಗಳೂರಿನಲ್ಲಿ ಅಪಾರ ಭಕ್ತಾಧಿಗಳಿಂದ ಶ್ರೀ ಸಾಯಿ ಪವಿತ್ರ ಪಾದುಕ ದರ್ಶನ : ಶ್ರೀ ನಿರ್ಮಲ್‍ನಾಥ್ ಜೀಯವರಿಂದ ಆಶೀರ್ವಚನ

Pinterest LinkedIn Tumblr

ಮಂಗಳೂರು,ಮೇ 23 : ಶಿರಿಡಿಯಿಂದ ಆಗಮಿಸಿರುವ ಶ್ರೀ ಸಾಯಿಬಾಬಾರ ಪವಿತ್ರ ಪಾದುಕಾ ದರ್ಶನ ಕಾರ್ಯಕ್ರಮ ಮಂಗಳೂರು ನಗರದ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ಮೇ 22ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ.

ಬುಧವಾರ ಬೆಳಗ್ಗೆ ಶ್ರೀ ಸಾಯಿ ಪಾದುಕಾ ಪೂಜೆ ಬಳಿಕ ಪಾದುಕಾ ದರ್ಶನ ಆರಂಭವಾಗಿದ್ದು, ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕದ್ರಿ ಯೋಗಿಮಠದ ಶ್ರೀ ನಿರ್ಮಲ್‍ನಾಥ್ ಜೀ ಆಶೀರ್ವಚನ ನೀಡಿದರು.

ಸಾಯಿಬಾಬ ಸಂಸ್ಥಾನ ಟ್ರಸ್ಟ್, ಶಿರಡಿ ಇದರ ಟ್ರಸ್ಟಿ ಬಿಪಿನ್ ದಾದ ಶಂಕರರಾವ್ ಕೋಲ್ಹೆ, ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಅಶಾಜ್ಯೋತಿ ರೈ, ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕ, ಚಲನ ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ.ಭೈರಪ್ಪ, ನಗರದ ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್, ಗಣೇಶ್ ಬಂಗೇರ, ಪಾಣೆಮಂಗಳೂರು ಗಾಣಿಗ ಸಂಘದ ಅಧ್ಯಕ್ಷ ರಘು ಸಪಲ್ಯ ಮುಂತಾದವರು ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಮಂಗಳೂರು ಶಿರಿಡಿ ಸಾಯಿಬಾಬಾ ಮಂದಿರದ ಪರವಾಗಿ ಹಾಗೂ ಸಾಯಿಬಾಬ ಸಂಸ್ಥಾನ ಟ್ರಸ್ಟ್, ಶಿರಡಿ ಇವರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರು ಶಿರಿಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್‍ಕುಮಾರ್ ದಾಸ್ ಸ್ವಾಗತಿಸಿದರು, ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.

ಅಪಾರ ಭಕ್ತಾಧಿಗಳಿಂದ ಶ್ರೀ ಸಾಯಿ ಪಾದುಕ ದರ್ಶನ :

ಸಾಯಿಬಾಬರವರು ಧರಿಸುತ್ತಿದ್ದ ಶ್ರೀ ಪಾದುಕೆಯನ್ನು ದರ್ಶನಾರ್ಥವಾಗಿ ಶಿರಿಡಿಯಿಂದ ತಂದು ಪೂಜಿಸುವ ಸುವರ್ಣಾವಕಾಶ ಚಿಲಿಂಬಿಯ ಸಾಯಿಬಾಬ ಮಂದಿರಕ್ಕೆ ಪ್ರಾಪ್ತವಾಗಿದ್ದು, ಮಂಗಳವಾರ ಸಾಯಂಕಾಲ ಶರವು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಶ್ರೀ ಸಾಯಿಬಾಬರ ಪವಿತ್ರ ಪಾದುಕೆಯನ್ನು ಸ್ವಾಗತಿಸಿ ಭವ್ಯ ಮೆರವಣಿಗೆ ಮೂಲಕ ಚಿಲಿಂಬಿಯ ಸಾಯಿಬಾಬ ಮಂದಿರಕ್ಕೆ ತರಲಾಗಿದೆ. ಚಿಲಿಂಬಿಯ ಸಾಯಿಬಾಬ ಮಂದಿರದಲ್ಲಿ ಇಂದು ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳು ಶ್ರೀ ಸಾಯಿ ಪಾದುಕ ದರ್ಶನ ಮಾಡಿದರು.

ಮೇ 24ರಂದು ಬೆಳಗ್ಗೆ 8ಕ್ಕೆ ಶ್ರೀ ಸಾಯಿ ಪಾದುಕಾ ಪೂಜೆ ಬಳಿಕ ಪಾದುಕಾ ದರ್ಶನ , ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 4.30ರವರೆಗೆ ಪಾದುಕಾ ದರ್ಶನ ನಡೆಯಲಿದ್ದು, ಸಾಯಂಕಾಲ 6.30ಕ್ಕೆ ರಂಗಪೂಜೆ ಸಹಿತ ಮಹಾ ಪೂಜೆ ನಡೆಯಲಿದೆ.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮೊಬೈಲ್ ಸಂಖ್ಯೆ :9035089084

Comments are closed.