ಕರ್ನಾಟಕ

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಯನ್ನು ವಿರೋಧಿಸಿ ಬಿಜೆಪಿಯಿಂದ ಕರಾಳ ದಿನ ಆಚರಣೆ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ ನಲ್ಲಿ ಅಸಮಾಧಾನ ಹೊಂದಿರುವ ಶಾಸಕರು ಬಿಜೆಪಿಗೆ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಯನ್ನು ವಿರೋಧಿಸಿ ರಾಜ್ಯಾದ್ಯಂತ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಜನಮತ ವಿರೋಧಿ ದಿನ ಆಚರಣೆಯ ನೇತೃತ್ವವನ್ನು ವಹಿಸಿ ಮಾತನಾಡಿದರು.

ರಾಜ್ಯದ ಜನತೆ ಬಿಜೆಪಿ ಪರವಾಗಿ ತೀರ್ಪು ನೀಡಿದ್ದಾರೆ. ಆದರೆ ಅಧಿಕಾರ ಪಡೆಯುವ ಒಂದೇ ಉದ್ದೇಶದಿಂದ ಇಂದು ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಈ ಬಗ್ಗೆ ಆ ಪಕ್ಷಗಳ ಕೆಲವು ಶಾಸಕರಿಗೆ ಅಸಮಾಧಾನಗಳಿವೆ. ಹೀಗಾಗಿ ಯಾವ ಶಾಸಕರಿಗೆ ಅಸಮಾಧಾನವಿದೆಯೋ ಅವರು ಬಿಜೆಪಿಗೆ ಬನ್ನಿ, ಸುಭದ್ರ ಸರ್ಕಾರವನ್ನು ರಚಿಸಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡೋಣ ಎಂದು ಕರೆ ನೀಡಿದರು.

ರೈತರ ಸಾಲದ ಜೊತೆಗೆ ಖಾಸಗಿ ಸಾಲವನ್ನೂ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ, ರಾಜ್ಯವನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಕೂಡ ಎಚ್ಚರಿಕೆ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಈ ದಿನ ರಾಜ್ಯಕ್ಕೇ ಕರಾಳ ದಿನ. ಹೀಗಾಗಿ ಕಪ್ಪು ಪಟ್ಟಿ ಧರಿಸಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ಜೆಡಿಎಸ್—ಕಾಂಗ್ರೆಸ್ ಅಪವಿತ್ರ ಮೈತ್ರಿಯನ್ನು ಜನ ಅಪಹಾಸ್ಯ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೇ ಕರ್ನಾಟಕದ ಜನ ನಿಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇನ್ನು ಯಾವ ಮುಖ ಇಟ್ಟುಕೊಂಡು ಇಲ್ಲಿಗೆ ಬರ್ತಿದ್ದೀರ ಎಂದು ಪ್ರಶ್ನಿಸಿದರು.

ಬಹುಮತ ಸಿಗದಿದ್ದರೆ ವಿರೋಧ ಪಕ್ಷದಲ್ಲಿ ಕೂರುವುದಾಗಿ ಹೇಳಿದ್ದ ದೇವೇಗೌಡ ಇಂದು ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ತಾಕತ್ತಿದ್ದರೆ, ಈಗಲೂ ಜನರ ಮುಂದೆ ಹೋಗೋಣ ಬನ್ನಿ. ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲುವು ಪಡೆಯದಿದ್ದರೆ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಸವಾಲು ಹಾಕಿದರು.

ಕಪ್ಪು ಪಟ್ಟಿ ತೊಟ್ಟು ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಬಿ.ಎಸ್. ಯಡಿಯೂರಪ್ಪ, ಆರ್.ಅಶೋಕ, ಶೋಭಾ‌ ಕರಂದ್ಲಾಜೆ, ರವಿಕುಮಾರಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬೆಂಗಳೂರಿನಂತೆಯೇ ರಾಜ್ಯದ ವಿವಿಧ ಕಡೆಗಳಲ್ಲೂ ಬಿಜೆಪಿ ಜನಮತ ವಿರೋಧಿ ದಿನ ಆಚರಣೆ ನಡೆಸಿತು.

ಹುಬ್ಬಳ್ಳಿ, ಕಲಬುರ್ಗಿ ಮತ್ತು ಶಿರಸಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಜನಾದೇಶದ ವಿರುದ್ಧ ಸರ್ಕಾರ ರಚಿಸುತ್ತಿವೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಲಬುರ್ಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.ಶಾಸಕ ಬಿ.ಜಿ.ಪಾಟೀಲ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿದರು.

ಶಿರಸಿಯಲ್ಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಘೋಷಣೆ ಕೂಗಿದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಶಾಸಕ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಜನಮತ ವಿರೋಧಿ ದಿನ ಆಚರಿಸಲಾಯಿತು.

Comments are closed.