ಬೆಂಗಳೂರು: ರೆಸಾರ್ಟ್ ವಾಸ್ತವ್ಯದಿಂದ ಕೆಲ ಕಾಂಗ್ರೆಸ್ ಶಾಸಕರು ರೋಸಿ ಹೋಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ .ಶಿವಕುಮಾರ್ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹಿಲ್ಟನ್ ರೆಸಾರ್ಟ್ ನಲ್ಲಿರುವ ಹಲವು ಶಾಸಕರು ಅಸಮಾಧಾನ ಹೊರ ಹಾಕಿರುವ ಬಗ್ಗೆ ತಿಳಿದು ಬಂದಿದ್ದು, ನಾವು ಬಿಜೆಪಿಯವರ ಹಲವು ಆಮಿಷಗಳಿಗೆ ಬಗ್ಗದೆ ಪಕ್ಷ ನಿಷ್ಠೆ ಮೆರೆದಿದ್ದೇವೆ. ಇನ್ನೂ ಯಾಕೆ ರೆಸಾರ್ಟ್ ವಾಸ್ತವ್ಯ. ನೀವು ಬೇಕಾದಲ್ಲಿ ಮನೆಗೆ ತೆರಳಿ ರಾತ್ರಿ ಮನೆಯಲ್ಲೇ ಕಳೆಯುತ್ತೀರಿ. ನಮಗೆ ಯಾಕೆ ಅವಕಾಶ ಇಲ್ಲ ಎಂದು ಪ್ರಶ್ನಿಸಿರುವುದಾಗಿ ವರದಿಯಾಗಿದೆ.
ನಮ್ಮ ಮೇಲೆ ನಂಬಿಕೆ ಇಲ್ಲವಾದಲ್ಲಿ ನಮಗೆ ಯಾಕೆ ಟಿಕೆಟ್ ನೀಡಿದಿರಿ ಎಂದು ಪ್ರಶ್ನಿಸಿರುವುದಾಗಿ ವರದಿಯಾಗಿದೆ.
ನೀವು ಕರೆದಲ್ಲಿ ಬಂದು ಪಕ್ಷ ನಿಷ್ಠೆ ತೋರುವುದಾಗಿ ಹಲವು ಶಾಸಕರು ಹೇಳಿರುವುದಾಗಿ ವರದಿಯಾಗಿದೆ.
ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ವಿಶ್ವಾಸಮತ ಸಾಬೀತು ಪಡಿಸುವವ ವರೆಗೆ ಶಾಸಕರನ್ನು ರೆಸಾರ್ಟ್‌ನಲ್ಲಿ ಉಳಿಸಿಕೊಳ್ಳುಲು ಪಕ್ಷ ಕಟ್ಟಪ್ಪಣೆ ಮಾಡಿದೆ.
ಆನಂದ್ ಸಿಂಗ್ ಜೊತೆ ಡಿಕೆಶಿ ಪ್ರತ್ಯೇಕ ಮಾತುಕತೆ
ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರೊಂದಿಗೆ ಡಿಕೆಶಿ ಅವರು ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕ ವಾಗಿ ಮಾತುಕತೆ ನಡೆಸಿದ್ದು ಯಾವುದೇ ಕಾರಣಕ್ಕೂ ಪಕ್ಷ ತೊರೆದು ಬಿಜೆಪಿಗೆ ವಾಪಾಸಾಗಬೇಡಿ. ನಿಮಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದಿರುವುದಾಗಿ ವರದಿಯಾಗಿದೆ.
ಯಾವುದೇ ಬೆದರಿಕೆಗಳಿಗೆ ಜಗ್ಗಬೇಡಿ. ನನ್ನ ಮೇಲೂ ಕೇಸ್‌ಗಳು ಇವೆ. ನಾನು ಹೆದರಿದ್ದೇನಾ ? ಹೆದರಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿ ನಿಮ್ಮ ನೆರವಿಗೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದಿರುವುದಾಗಿ ವರದಿಯಾಗಿದೆ.
Comments are closed.