ಕರ್ನಾಟಕ

ಬಿಜೆಪಿ ಸಮಾಜ ಒಡೆದು ಆಳುವ ಕೋಮುವಾದಿ ಪಕ್ಷ: ಶಾಗೆ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಜಾತ್ಯತೀತ ಸರಕಾರವೊಂದನ್ನು ರಚಿಸುತ್ತಿರುವ ಮತ್ತು ಧರ್ಮದ ಆಧಾರದಲ್ಲಿ ಜನರು, ಸಮುದಾಯಗಳನ್ನು ಒಡೆದು ಆಳುವ ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಮಾಧ್ಯಮಗಳ ಮೂಲಕ ಕರ್ನಾಟಕದ ಮೈತ್ರಿ ಕೂಟವನ್ನು ಟೀಕಿಸಿ, ಮೈತ್ರಿ ಕೂಟ ಪಕ್ಷಗಳು ಏತಕ್ಕಾಗಿ ಸಂಭ್ರಮಿಸುತ್ತಿದ್ದೀರಿ ಎಂದು ಅಮಿತ್ ಶಾ ಪ್ರಶ್ನಿಸಿದ್ದರು. ಖಾರವಾಗಿ ಪ್ರತಿಕ್ರಿಯಿಸಿರುವ ಎಚ್.ಡಿ.ಕುಮಾರಸ್ವಾಮಿ, ಚುನಾವಣೆ ಫಲಿತಾಂಶ ಬಂದು ಒಂದು ವಾರ ಕಳೆದ ಬಳಿಕ ಅಮಿತ್ ಶಾ ದಿಢೀರ್ ಪ್ರತ್ಯಕ್ಷರಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಪವಿತ್ರ ಎಂದು ವಾದಿಸಿದ್ದಾರೆ. ಹಾಗಾದರೆ ಪವಿತ್ರವಾದದ್ದು ಯಾವುದು? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು ಪವಿತ್ರವಾದ ಕಾರ್ಯವಲ್ಲವೇ ಎಂದು ಕೇಳಿದರು.

ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಆ ಕಾರಣಕ್ಕಾಗಿಯೇ ಜಾತ್ಯತೀತ ತತ್ವದ ಅಡಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ. ನಮ್ಮ ಮೈತ್ರಿಗೆ ಒಂದು ನೆಲೆ ಇದೆ. ಹಿತ ಕಾಯುವ, ಎಲ್ಲರನ್ನೂ ಒಳಗೊಂಡಂತೆ ಪ್ರಗತಿ ಕಡೆಗೆ ಹೆಜ್ಜೆ ಹಾಕುವುದು ನಮ್ಮ ಈ ಮೈತ್ರಿ ಕೂಟದ ಮೂಲ ನೆಲೆ. ಅದನ್ನು ಅಪವಿತ್ರ ಮೈತ್ರಿ ಎನ್ನುತ್ತಿರುವ ನಿಮ್ಮ ಅಭಿಪ್ರಾಯ ಅಪವಿತ್ರವಾದದ್ದು ಎಂದು ಕುಟುಕಿದರು.

ಚುನಾವಣೆ ಮುಗಿದಾಗಿನಿಂದಲೂ ನಮ್ಮದು ಏಕೈಕ ದೊಡ್ಡ ಪಕ್ಷ, ನಾವೇ ಸರಕಾರ ಮಾಡಬೇಕಿತ್ತು ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ಅಡಿಯಲ್ಲಿ ಬಹುಮತ ಇರುವವರು ಸರಕಾರ ರಚಿಸಬೇಕೆ ವಿನಃ ಏಕೈಕ ದೊಡ್ಡ ಪಕ್ಷವಲ್ಲ. ಜೆಡಿಎಸ್-ಕಾಂಗ್ರೆಸ್ ಕೂಟ 2.25 ಕೋಟಿ ಮತ ಪಡೆದಿದೆ. ಬಿಜೆಪಿ ಪಡೆದಿರುವುದು 1.31 ಕೋಟಿ ಮತ. ಯಾರಿಗೆ ಬಹುಮತ ಇದೆ ಎಂದು ಬಿಜೆಪಿ ಅರಿತುಕೊಳ್ಳಲಿ ಎಂದರು.

Comments are closed.