ಅಬುಧಾಬಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರಿಗೆ ಹಾಗೂ ಜಗತ್ತಿನಾದ್ಯಂತದ ಪ್ರತಿಭೆಗಳಿಗೆ ಸಂಯುಕ್ತ ಅರಬ್ ಸಂಸ್ಥಾನ ಮೊದಲ ಆಯ್ಕೆಯಾಗಬೇಕೆಂಬ ಉದ್ದೇಶದಿಂದ ರಾಷ್ಟ್ರದ ಸಚಿವ ಸಂಪುಟವು ಹೂಡಿಕೆದಾರರಿಗೆ ಹಾಗೂ ವೃತ್ತಿಪರರಿಗಾಗಿ ಹೊಸ ವೀಸಾ ವ್ಯವಸ್ಥೆಯನ್ನು ಅಂಗೀಕರಿಸಿದ್ದು, ಅವರಿಗೆ ಹತ್ತು ವರ್ಷದ ತನಕ ದೀರ್ಘಾವಧಿ ವೀಸಾ ನೀಡಲು ನಿರ್ಧರಿಸಿದೆ.
ಸಂಯುಕ್ತ ಅರಬ್ ಸಂಸ್ಥಾನದ ದೊರೆ, ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೌಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲಿನ ತೀರ್ಮಾನ ಕೈಗೊಳ್ಳಲಾಗಿದೆ. ಆರಂಭದಲ್ಲಿ ಈ ಬಗೆಗಿನ ಮಾಹಿತಿ ಶೇಖ್ ಮುಹಮ್ಮದ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಿಂದ ಬಂದಿತ್ತು.
“ಅಸಾಧಾರಣ ಪ್ರತಿಭೆಗಳಿಗೆ ಸಂಯುಕ್ತ ಅರಬ್ ಸಂಸ್ಥಾನ ಜಾಗತಿಕ ಇಂಕ್ಯುಬೇಟರ್ ಆಗಲಿದೆ ಹಾಗೂ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಪ್ರಥಮ ಆದ್ಯತೆಯ ತಾಣವಾಗಲಿದೆ. ನಮ್ಮ ಮುಕ್ತ ವಾತಾವರಣ, ಸಹಿಷ್ಣುತಾ ಮೌಲ್ಯಗಳು, ಮೂಲಭೂತ ಸೌಕರ್ಯಗಳು ಹಾಗೂ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಕಾನೂನುಗಳು ಜಾಗತಿಕ ಹೂಡಿಕೆಗೆ ಹಾಗೂ ಅಸಾಧಾರಣ ಪ್ರತಿಭೆಗಳನ್ನು ನಮ್ಮ ದೇಶಕ್ಕೆ ಆಕರ್ಷಿಸುವುದು” ಎಂದು ಶೇಖ್ ಮುಹಮ್ಮದ್ ಹೇಳಿದ್ದಾರೆ.
ಈ ಹೊಸ ವೀಸಾ ವ್ಯವಸ್ಥೆಯು ಹೂಡಿಕೆದಾರರನ್ನು ಹಾಗೂ ಪ್ರತಿಭೆಗಳನ್ನು ಆಕರ್ಷಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಹಾಗೂ ಈ ಮೂಲಕ ದೇಶದ ಆರ್ಥಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ವರ್ಷದ ಅಂತ್ಯಕ್ಕೆ ಸಂಯುಕ್ತ ಅರಬ್ ಸಂಸ್ಥಾನ ಮೂಲದ ಉದ್ಯಮಗಳ ಜಾಗತಿಕ ಹೂಡಿಕೆದಾರರ ಮಾಲಕತ್ವವು ಶೇ.100ಕ್ಕೆ ತಲುಪುವ ನಿರೀಕ್ಷೆಯಿದೆ.
ಈ ಹೊಸ ವ್ಯವಸ್ಥೆಯನ್ವಯ ಹೂಡಿಕೆದಾರರಿಗೆ ಹಾಗೂ ಅಸಾಧಾರಣ ಪ್ರತಿಭೆಗಳಿಗೆ 10 ವರ್ಷಗಳ ತನಕದ ರೆಸಿಡೆನ್ಸಿ ವೀಸಾ ಲಭ್ಯವಾಗಲಿದೆ. ಈ ವೀಸಾ ವೈದ್ಯಕೀಯ, ವೈಜ್ಞಾನಿಕ, ಸಂಶೋಧನಾ, ತಾಂತ್ರಿಕ ಕ್ಷೇತ್ರಗಳ ಪರಿಣತರಿಗೆ ಹಾಗೂ ಎಲ್ಲಾ ವಿಜ್ಞಾನಿಗಳಿಗೆ ಹಾಗೂ ಅನ್ವೇಷಕರಿಗೆ ಲಭ್ಯವಾಗಲಿದೆ. ದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 5 ವರ್ಷಗಳ ರೆಸಿಡೆನ್ಸಿ ವೀಸಾ ಹಾಗೂ ಅಸಾಧಾರಣ ಪ್ರತಿಭೆಯ ವಿದ್ಯಾರ್ಥಿಗಳಿಗೆ 10 ವರ್ಷದ ತನಕದ ರೆಸಿಡೆನ್ಸಿ ವೀಸಾ ಒದಗಿಸಲಾಗುವುದು.
ದೇಶದಲ್ಲಿ ತಮ್ಮ ಹೆತ್ತವರ ಸಹಾಯದಿಂದ ಶಿಕ್ಷಣ ಪಡೆದವರು ತಮ್ಮ ವಿಶ್ವವಿದ್ಯಾಲಯ ಶಿಕ್ಷಣ ಮುಗಿಸಿದ ಮೇಲೆ ಅವರಿಗೆ ಮತ್ತೆ ದೇಶದಲ್ಲಿ ನೆಲೆಗೊಳ್ಳಲು ಅನುಕೂಲವಾಗುವಂತೆ ವೀಸಾ ವಿಸ್ತರಿಸುವ ಕುರಿತಾದ ರೆಸಿಡೆನ್ಸಿ ವೀಸಾ ವ್ಯವಸ್ಥೆಯನ್ನು ಪರಿಶೀಲಿಸುವಂತೆಯೂ ಸಚಿವ ಸಂಪುಟವು ಸಂಬಂಧಿತ ಇಲಾಖೆಗೆ ಸೂಚನೆ ನೀಡಿದೆ.
Comments are closed.