ಬೆಂಗಳೂರು: ಮುಂಗಾರು ಪ್ರವೇಶಿಸುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ
ಕುಸಿತವಾಗುವ ಸಂಭವವಿದ್ದು, ಇದರಿಂದಾಗಿ ಮುಂದಿನ ನಾಲ್ಕೆçದು ದಿನಗಳ ಕಾಲ ಕರಾವಳಿ ಸೇರಿ ರಾಜ್ಯದಲ್ಲಿ
ಗುಡುಗು, ಸಿಡಿಲು, ಗಾಳಿ ಜತೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ
ನೀಡಿದೆ.
ಈ ಮಧ್ಯೆ, ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಪ್ಪಳದಲ್ಲಿ
ರಾಜ್ಯದಲ್ಲಿಯೇ ಅಧಿಕ 9 ಸೆಂ.ಮೀ.ಗಳಷ್ಟು ಮಳೆ ಸುರಿಯಿತು. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 42.6 ಡಿ.ಸೆ.ತಾಪಮಾನ ದಾಖಲಾಯಿತು.
ರಾಜಧಾನಿ ಬೆಂಗಳೂರು, ಮೈಸೂರು ಸೇರಿ ರಾಜ್ಯದ ಕೆಲವೆಡೆ ಮಳೆಯಾಗಿದೆ. ಮೈಸೂರಿನಲ್ಲಿ ಶನಿವಾರ ರಾತ್ರಿ
ಸುರಿದ ಧಾರಾಕಾರ ಮಳೆಗೆ ಹಲವೆಡೆ ಮರಗಳು ಧರೆಗೆ ಉರುಳಿವೆ. ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ
ಆವರಣದಲ್ಲಿ ನಿಲ್ಲಿಸಿದ್ದ ಜೀಪ್ ಮೇಲೆ ಮರ ಉರುಳಿ ಬಿದ್ದು, ಜೀಪು ಸಂಪೂರ್ಣ ಜಖಂಗೊಂಡಿದೆ. ನರಸಿಂಹರಾಜ ಉಪ
ವಿಭಾಗದ ಎಸಿಪಿ ಗೋಪಾಲ್, ಎಎಸ್‌ಐ ದೊರೆಸ್ವಾಮಿ,ಮುಖ್ಯ ಪೇದೆ ಮಲ್ಲಿಕಾರ್ಜುನಪ್ಪ ಅವರು ಕೂದಲೆಳೆ
ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬದಲ್ಲಿ ಮಳೆ, ಗಾಳಿಯಿಂದಾಗಿ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ
ಹಾನಿಯಾಗಿದೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನಲ್ಲಿ ಮಳೆಯಾಗಿದ್ದು, ಹಲವು ಮನೆಗಳಿಗೆ ಹಾನಿ ಸಂಭವಿಸಿದೆ.
ಸಿಡಿಲು ಬಡಿದು ಕಾಳೇಗೌಡನ ಕೊಪ್ಪಲು ಗ್ರಾಮದ ಯೋಧ ಕೆ.ಜೆ.ಸತೀಶ್ ಅವರ ತಾಯಿ ಭಾರತಮ್ಮ ಹಾಗೂ ತಂದೆ ಜವರೇಗೌಡ ಎಂಬುವರು ಗಾಯಗೊಂಡಿದ್ದಾರೆ. ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಒಡೆದು ಹೋಗಿದೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಮಳೆಗೆ ಸುಮಾರು 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಜಖಂಗೊಂಡಿವೆ. ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿವೆ. ದೊಡ್ಡಬಳ್ಳಾಪುರ ತಾಲೂಕಿನ ಬಿಸುವನಹಳ್ಳಿ ಗ್ರಾಮದ ರಂಗಣ್ಣ ಎಂಬುವರ ಮನೆಗೆ ಸಿಡಿಲು ಬಡಿದು ಗೋಡೆಗಳು ಬಿರುಕು ಬಿಟ್ಟಿವೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹೆಬ್ಬತ್ತಿಯ ಶ್ರೀಧರ ನಾಯ್ಕ ಎಂಬುವರ ಮನೆ ಹಾಗೂ ತೆಂಗಿನಮರಗಳು
ಸಿಡಿಲಿನಿಂದ ಹಾನಿಗೊಳಗಾಗಿವೆ.
ಮೀನುಗಾರರಿಗೆ ಎಚ್ಚರಿಕೆ: ಮುಂದಿನ 48 ತಾಸುಗಳಲ್ಲಿ ಸಾಗರ್ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರ ಪ್ರಕ್ಷುಬಟಛಿವಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು. ಮೀನುಗಾರಿಕೆಗೆ ತೆರಳಿರುವ ಎಲ್ಲ ದೋಣಿಗಳು ಕೂಡಲೇ ದಡ ಸೇರಬೇಕೆಂದು ಮೀನುಗಾರಿಕಾ ಉಪ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
29ರಂದು ನೈಋತ್ಯ ಮುಂಗಾರು ಕೇರಳ ಪ್ರವೇಶಿಸುವ ಮುನ್ಸೂಚನೆ
2 ದಿನಗಳ ಹಿಂದೆ ಉಂಟಾಗಿದ್ದ “ಸಾಗರ್’ ಹೆಸರಿನ ಚಂಡಮಾರುತ ಸೌದಿಯತ್ತ ಚಲಿಸುತ್ತಿರುವುದು ಕಂಡು ಬಂದಿದೆ. ಈ ಚಂಡಮಾರುತದಿಂದ ಸದ್ಯಕ್ಕೆ ರಾಜ್ಯದ ಕರಾವಳಿ ಭಾಗಕ್ಕೆ ಯಾವುದೇ ಅಪಾಯವಿಲ್ಲ.
ಆದರೆ, ಅದರ ಪರಿಣಾಮವಾಗಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆಯಿದೆ.ಅಲ್ಲದೆ, ಪ್ರತಿವರ್ಷವೂ ವಾಡಿಕೆಯಂತೆ ನೈಋತ್ಯ ಮುಂಗಾರು ಕೇರಳ ಹಾಗೂ ಕರ್ನಾಟಕದ ಕರಾವಳಿ ತೀರವನ್ನು ಪ್ರವೇಶಿಸುವುದಕ್ಕೂ ಮುನ್ನ ಅರಬ್ಬಿ ಸಮುದ್ರದಲ್ಲಿ ಮೇಲ್ಮೆç ಸುಳಿಗಾಳಿ ಉಂಟಾಗಿ ವಾಯುಭಾರ ಕುಸಿತವಾಗುತ್ತದೆ. ಇದರ ಪರಿಣಾಮ, ಮುಂದಿನ ನಾಲ್ಕೆçದು ದಿನ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ.
ಮೇ 29ರಂದು ನೈಋತ್ಯ ಮುಂಗಾರು ಕೇರಳ ಪ್ರವೇಶಿಸುವ ಮುನ್ಸೂಚನೆಯಿದೆ. ಇದಾದ ಮೂರು ದಿನಗಳಲ್ಲಿ ರಾಜ್ಯದ ಕರಾವಳಿ ತೀರಕ್ಕೆ ಆಗಮಿಸಿ ಮಳೆಗಾಲ ಪ್ರಾರಂಭವಾಗಲಿದೆ. ಎರಡು ದಿನಗಳ ಹಿಂದೆ ಸೃಷ್ಟಿಯಾಗಿದ್ದ ಸಾಗರ್ ಚಂಡಮಾರುತ ಈಗಾಗಲೇ ದುರ್ಬಲಗೊಂಡಿದ್ದು, ಅದು ನೈಋತ್ಯ ಮುಂಗಾರು ಆಗಮನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ನಿರ್ದೇಶಕ ಶ್ರೀನಿವಾಸ ರೆಡ್ಡಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಳೆ ಸಂಬಂಧಿ ಅವಘಡ: ಮೂವರ ಸಾವು ಹೊಸನಗರ/ಬಳ್ಳಾರಿ/ಹುಣಸೂರು: ಮಳೆ ಸಂಬಂಧಿ ನಡೆದ ಅವಘಡದಲ್ಲಿ ಮೂವರು ಮೃತ ಪಟ್ಟಿದ್ದಾರೆ. ಕೊಡಚಾದ್ರಿ ಶಿಖರದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಕೇರಳದ ತ್ರಿಶೂರ್ ಜಿಲ್ಲೆ ಮುಖುಂದಪುರಂ ತಾಲೂಕಿನ ಇರಂಜಾಯ ಕೋಡು ವಾಸಿ ವಿಷ್ಣುಕುಮಾರ (ಮನು) (24)
ಎಂಬುವರು ಮೃತಪಟ್ಟಿದ್ದಾರೆ.
ಶರತಕುಮಾರ, ಸುದೇಶ ಕಾಮತ್ ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಕೊಡಚಾದ್ರಿಗೆ ಆಗಮಿಸಿದ ಇವರು,
ಇಲ್ಲಿನ ಮೂಲ ಮೂಕಾಂಬಿಕೆ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಸರ್ವಜ್ಞ ಪೀಠಕ್ಕೆ ತೆರಳಿ ಅಲ್ಲಿಯೇ ತಂಗಿದ್ದರು.ತಡರಾತ್ರಿ ಸುಮಾರು 3.30ಕ್ಕೆ ಸಿಡಿಲು ಸಹಿತ ಮಳೆ ಸುರಿದಿದ್ದು, ಸರ್ವಜ್ಞ ಪೀಠದ ಜಗುಲಿಯಲ್ಲಿ ಮಲಗಿದ್ದ ಮೂವರಿಗೂ ಸಿಡಿಲು ಬಡಿಯಿತು.
ಛಾವಣಿ ಕುಸಿದು ಬಾಲಕಿ ಸಾವು: ಶೆಡ್ ಮೇಲ್ಛಾವಣಿ ಕುಸಿದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ತಾಲೂಕಿನ ಬುರ್ರನಾಯಕನಹಳ್ಳಿ ಗ್ರಾಮದ ಹೊರವಲಯದ ಹೊಲದಲ್ಲಿ ಶನಿವಾರ ರಾತ್ರಿ ನಡೆದಿದೆ. ಕೊಳಗಲ್ಲು ಗ್ರಾಪಂ ವ್ಯಾಪ್ತಿಯ ಕೃಷ್ಣಾನಗರ ಕ್ಯಾಂಪಿನ ನಿವಾಸಿ ಲಕ್ಷ್ಮೀನಾರಾಯಣ ಎಂಬುವವರ ಪುತ್ರಿ ಕುಮಾರಿ (13) ಮೃತಪಟ್ಟ ಬಾಲಕಿ.ವಿದ್ಯುತ್ ತಂತಿ ತಗುಲಿ ರೈತ ಸಾವು: ಹುಣಸೂರು ತಾಲೂಕಿನ ಮುಳ್ಳೂರಿನಲ್ಲಿ ನಾಲಾ ಏರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟಿದ್ದಾನೆ.
ಗ್ರಾಮದ ಯೋಗೇಶಾಚಾರಿ (38) ಎಂಬುವರು ತಮ್ಮ ಎತ್ತಿನ ಗಾಡಿಯೊಂದಿಗೆ ತಂಬಾಕು ನಾಟಿಗಾಗಿ ಭೂಮಿ ಹದ ಮಾಡಲು ಜಮೀನಿಗೆ ತೆರಳುತ್ತಿದ್ದರು. ಬಿರುಗಾಳಿ ಸಹಿತ ಮಳೆಯಿಂದಾಗಿ ತುಂಡಾಗಿ, ಜೋತು ಬಿದ್ದಿದ್ದ ವಿದ್ಯುತ್ ತಂತಿ ಎತ್ತಿಗೆ ತಗುಲಿತು. ಗಾಬರಿಗೊಂಡ ಎತ್ತು ಮುಂದಡಿ ಇಡುತ್ತಿದ್ದಂತೆ ಯೋಗೇಶಾಚಾರಿಗೆ ವಿದ್ಯುತ್ ತಂತಿ ತಗುಲಿತು. ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Comments are closed.