ಬೆಂಗಳೂರು: ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳಿಂದ ಶಾಸಕರಾಗಿ ಆಯ್ಕೆಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ನಿರೀಕ್ಷೆಯಂತೇ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ರಾಮನಗರಕ್ಕೆ ರಾಜೀನಾಮೆ ನೀಡಿರುವುದು ಅನಿರೀಕ್ಷಿತ.
ಯಾವುದೇ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿದ್ದರೆ, ವಿಧಾನಸಭೆಯಲ್ಲಿ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಯಾವುದಾದರೂ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಬೇಕು. ಹಾಗೆಯೇ ಎಚ್.ಡಿ. ಕುಮಾರಸ್ವಾಮಿ ಕೂಡ ತಾವು ಪ್ರಮಾಣ ವಚನ ಸ್ವೀಕರಿಸುವಾಗ ಚನ್ನಪಟ್ಟಣವನ್ನು ಉಳಿಸಿಕೊಂಡು ರಾಮನಗರಕ್ಕೆ ರಾಜೀನಾಮೆ ನೀಡಿದ್ದಾರೆ.
ಒಂದು ಬಾರಿ ಕನಕಪುರ ಲೋಕಸಭೆಗೆ ಆಯ್ಕೆಯಾಗಿದ್ದ ಕುಮಾರಸ್ವಾಮಿ ಸಾತನೂರು ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತಿದ್ದರು. ಅದಾದ ಮೇಲೆ ಕನಕಪುರ ಲೋಕಸಭೆ ಕ್ಷೇತ್ರಕ್ಕೆ ಪುನಃ ಸ್ಪರ್ಧಿಸಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಅಲ್ಲಿಯೂ ಸೋತಿದ್ದರು. ಆದರೆ, ಅವರಿಗೆ 2004ರಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದ ಮೂಲಕ ರಾಜಕೀಯ ಪುನರ್ಜನ್ಮ ಸಿಕ್ಕಿತ್ತು. ಪ್ರಥಮ ಬಾರಿಗೆ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಅದೇ ಅವಧಿಯಲ್ಲೇ ಮುಖ್ಯಮಂತ್ರಿಯೂ ಆದ ಕುಮಾರಸ್ವಾಮಿ ಅಂದಿನಿಂದ ಇಲ್ಲಿಯವರೆಗೆ ರಾಮನಗರದ ಜತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.
ರಾಮನಗರದಿಂದ ಈ ವರೆಗೆ ನಾಲ್ಕು ಬಾರಿ ಗೆದ್ದಿರುವ ಕುಮಾರಸ್ವಾಮಿ ಸ್ಥಳೀಯವಾಗಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಹೊಂದಿದ್ದಾರೆಂದರೆ, 2004ರ ವಿಧಾನಸಭೆ ಚುನಾವಣೆ ಹೊರತುಪಡಿಸಿದರೆ, 2008, 2013, 2018ರ ಚುನಾವಣೆಯಲ್ಲಿ ಪ್ರಚಾರಕ್ಕೆಂದು ಕುಮಾರಸ್ವಾಮಿ ಕ್ಷೇತ್ರಕ್ಕೆ ಒಂದೇ ಒಂದು ದಿನವೂ ಹೋಗದಿದ್ದರೂ, ಅಲ್ಲಿನ ಜನ ಭಾರಿ ಅಂತರದಲ್ಲಿ ಗೆಲ್ಲಿಸಿದ್ದಾರೆ.
ಹೀಗಿರುವ ರಾಮನಗರ ಕ್ಷೇತ್ರವನ್ನು ಈ ಬಾರಿ ಕುಮಾರಸ್ವಾಮಿ ಅವರು ಬಿಟ್ಟು ಕೊಟ್ಟು, ಚನ್ನಪಟ್ಟಣ ಉಳಿಸಿಕೊಂಡಿದ್ದಾರೆ. ಅದರ ಹಿಂದೆ ಮತ್ತೊಂದು ರಾಜಕೀಯ ಪಟ್ಟು ಅಡಗಿದೆ. ಚನ್ನಪಟ್ಟಣದಲ್ಲಿ ರಾಮನಗರದಷ್ಟು ಅನುಕೂಲಕಾರಿ ಪರಿಸ್ಥಿತಿ ಇಲ್ಲ. ಅಲ್ಲಿನ ಸ್ಥಳೀಯ ಮುಖಂಡ, ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಪ್ರಬಲ ಮತ್ತು ಜನಪ್ರಿಯ ಅಭ್ಯರ್ಥಿ. ಕೆರೆಗಳ ಮರುಪೂರಣ ಕಾರ್ಯದಿಂದ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಯೋಗೀಶ್ವರ್ ಈ ಬಾರಿ ಸೋತಿರುವುದು ಕುಮಾರಸ್ವಾಮಿ ಅವರ ಕಾರಣಕ್ಕೆ ಮಾತ್ರ. ಈ ಗೆಲುವಿನಲ್ಲಿ ಕುಮಾರಸ್ವಾಮಿ ಅವರ ಜನಪ್ರಿಯತೆ, ಮುಖ್ಯಮಂತ್ರಿ ಅಭ್ಯರ್ಥಿ ಎಂಬ ವಿಚಾರ ಮತ್ತು ಒಕ್ಕಲಿಗರ ನಾಯಕ ಎಂಬ ಮೂರು ಅಂಶಗಳು ಕೆಲಸ ಮಾಡಿರಲು ಸಾಧ್ಯತೆಗಳಿವೆ. ಗೆಲುವಿಗೆ ಸಹಕಾರಿಯಾದ ಈ ಕಾರಣಗಳು ಸಾಮಾನ್ಯ ಅಭ್ಯರ್ಥಿಗಳಲ್ಲಿ ಇಲ್ಲದೇ ಹೋದರೆ ಸಿ.ಪಿ. ಯೋಗೀಶ್ವರ್ ಅವರನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ.
ಈ ಕಾರಣಕ್ಕೆ, ಚನ್ನಪಟ್ಟಣಕ್ಕೆ ರಾಜೀನಾಮೆ ನೀಡಿ ಒಂದು ಸ್ಥಾನವನ್ನು ಕಳೆದುಕೊಳ್ಳುವುದಕ್ಕಿಂತ ಅದನ್ನು ಉಳಿಸಿಕೊಂಡು ತಮ್ಮ ಪ್ರಬಲ ಹಿಡಿತವಿರುವ ರಾಮನಗರವನ್ನು ಗೆದ್ದುಕೊಳ್ಳುವುದು ಕುಮಾರಸ್ವಾಮಿ ಅವರ ತಂತ್ರಗಾರಿಕೆ ಇದ್ದಂತಿದೆ.
ಸದ್ಯ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರವನ್ನು ಎಚ್ಡಿಕೆ ತಮ್ಮ ಕುಟುಂಬದ ಸುಪರ್ದಿಯಲ್ಲೇ ಉಳಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆಯಾದರೂ, ಆ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಈ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ಇಬ್ಬರಷ್ಟೇ ಸ್ಪರ್ಧಿಸುವುದು ಎಂದು ಈಗಾಗಲೇ ಘೋಷಿಸಿರುವ ಕುಮಾರಸ್ವಾಮಿ ಅವರು, ಆ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ, ಕುಟುಂಬಸ್ಥರ ಸ್ಪರ್ಧೆಯನ್ನೂ ಮೀರಿ ತಮಗೆ ಆಪ್ತರಾದ ಯಾರಾದರೂ ಒಬ್ಬರನ್ನು ಗೆಲ್ಲಿಸಿಕೊಂಡು ವಿಧಾನಸಭೆಗೆ ಕರೆದೊಯ್ಯುವ ಇರಾದೆಯಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಅಂಬರೀಷ್ಗೆ ಸೋಲುಣಿಸಿದ್ದ ಕ್ಷೇತ್ರ
ಹಿಂದಿನಿಂದಲೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಪ್ರಬಲ ಹಿಡತಕ್ಕೆ ಒಳಪಟ್ಟಿರುವ ರಾಮನಗರ ಕ್ಷೇತ್ರ ಒಂದು ಬಾರಿ ದೇವೇಗೌಡರ ಕುಟುಂಬಕ್ಕೆ ವಿರುದ್ಧವಾಗಿ ವರ್ತಿಸಿದ ಉದಾಹರಣೆ ಇದೆ. ರಾಮನಗರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಪ್ರಧಾನಿಯಾದ ಕಾರಣಕ್ಕೆ ರಾಮನಗರದಲ್ಲಿ ರಾಜೀನಾಮೆ ನೀಡಿ ಚಿತ್ರನಟ, ಒಕ್ಕಲಿಗ ಸಮುದಾಯದ ಅಂಬರೀಷ್ ಅವರನ್ನು ಕ್ಷೇತ್ರದಿಂದ ಸ್ಪರ್ಧೆಗಿಳಿಸಿದ್ದರು. ಆದರೆ, ದೇವೇಗೌಡರ ಬೆಂಬಲವಿದ್ದಾಗ್ಯೂ ಅಂಬರೀಷ್ ಅವರನ್ನು ಅಲ್ಲಿನ ಜನ ಸೋಲಿಸಿದ್ದರು. ಸ್ಥಳೀಯ ನಾಯಕ ಸಿ.ಎಂ. ಲಿಂಗಪ್ಪ ಆ ಚುನಾವಣೆಯಲ್ಲಿ ಗೆದ್ದಿದ್ದರು.
Comments are closed.