ಕರ್ನಾಟಕ

ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ರೆಸಾರ್ಟ್‌ಗೆ ಮರಳಿದ ಕಾಂಗ್ರೆಸ್‌ ಶಾಸಕರು

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ವಿರೋಧಿಸಿ ಸ್ವಲ್ಪ ಹೊತ್ತು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಕಾಂಗ್ರೆಸ್‌ ಶಾಸಕರು ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ಗೆ ವಾಪಸಾದರು.

ಇದೇ ವೇಳೆ ‘ಕುದುರೆ ವ್ಯಾಪಾರ’ದ ಆರೋಪವನ್ನು ಕಾಂಗ್ರೆಸ್‌ ತೀವ್ರಗೊಳಿಸಿದೆ.

ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಶಾಸಕರು ವಿಧಾನ ಸೌಧದ ಮುಂಭಾಗದ ಗಾಂಧಿ ಪ್ರತಿಮೆ ಎದುರು ಕೆಲ ಕಾಲ ಧರಣಿ ನಡೆಸಿದರು.

ಧರಣಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್‌, ಅಶೋಕ್‌ ಗೆಹ್ಲೋಟ್‌, ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದ ಉಸ್ತುವಾರಿ ಹೊತ್ತ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಪಾಲ್ಗೊಂಡಿದ್ದರು.

ಸ್ವಲ್ಪ ಹೊತ್ತಿನ ನಂತರ ಜೆಡಿಎಸ್‌ ಶಾಸಕರು ಹಾಗೂ ಮುಖಂಡರು ಅವರ ಜತೆ ಸೇರಿಕೊಂಡರು. ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಒಟ್ಟಿಗೆ ಇರಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್‌, ಬೆಂಗಳೂರು ಹೊರವಲಯದ ವಿಶಾಲವಾದ ರೆಸಾರ್ಟ್‌ನಲ್ಲಿ ಕೂಡಿಹಾಕಿದೆ. ಜೆಡಿಎಸ್‌ ಸದ್ಯಕ್ಕೆ ತನ್ನ ಶಾಸಕರನ್ನು ಶಾಂಗ್ರಿಲಾ ಹೋಟೆಲ್‌ನಲ್ಲಿ ಇರಿಸಿದೆ ಎಂದು ವರದಿಗಳು ತಿಳಿಸಿವೆ.

Comments are closed.