ಕರ್ನಾಟಕ

10 ಸಾವಿರ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ: ನ್ಯಾಯಾಲಯ ಷರತ್ತುಬದ್ಧ ಮುನಿರತ್ನಗೆ ಜಾಮೀನು

Pinterest LinkedIn Tumblr


ಬೆಂಗಳೂರು: ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸುಮಾರು 10 ಸಾವಿರ ಮತದಾರರ ಗುರುತಿನ ಚೀಟಿ (ಎಪಿಕ್‌ ಕಾರ್ಡ್‌) ಪತ್ತೆ ಹಾಗೂ ಸದಾಶಿವ ನಗರ ಠಾಣೆಯಲ್ಲಿ ದಾಖಲಾಗಿರುವ 91 ಲಕ್ಷ ರೂ. ಟಿ ಶರ್ಟ್‌ ಹಾಗೂ ಶಾರ್ಟ್ಸ್‌ ಪತ್ತೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರಿಗೆ 7ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ತನ್ನ ವಿರುದ್ಧ ದಾಖಲಾಗಿರುವ ಎರಡೂ ಪ್ರಕರಣಗಳಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಮುನಿರತ್ನ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಜಾಲಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಮುನಿರತ್ನ ಅವರಿಗೆ 3 ಸಾವಿರ ರೂ. ನಗದು ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಪ್ರಕರಣದಲ್ಲಿ ಒಂದನೇ ಆರೋಪಿ ಮೋಮಿನ್‌ ಹೊರತುಪಡಿಸಿ ಉಳಿದೆಲ್ಲ ಆರೋಪಿಗಳು ಜಾಮೀನು ಪಡೆದಿದ್ದಾರೆ.

ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರಿಗೆ ಉಡುಗೊರೆ ಅಮಿಷ ಒಡ್ಡಿ ಎಪಿಕ್‌ ಕಾರ್ಡ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಸ್ಥಳೀಯ ಬಿಜೆಪಿ ಮುಖಂಡ ರಾಕೇಶ್‌ ಸೇರಿದಂತೆ ಇನ್ನಿತರರು ದಾಳಿ ನಡೆಸಿದ್ದರು. ಭಾರಿ ಪ್ರಮಾಣದ ಮತದಾರರ ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ಆರ್‌.ಆರ್‌ ನಗರ ಕ್ಷೇತ್ರದ ಮತದಾನವನ್ನು ಮೇ 28ಕ್ಕೆ ಚುನಾವಣೆ ಆಯೋಗ ಮುಂದೂಡಿದೆ.

ಮತ್ತೊಂದು ಪ್ರಕರಣದಲ್ಲಿ ಜಾಮೀನು

ಅಶ್ವತ್ಥ ನಗರದಲ್ಲಿ 91 ಲಕ್ಷ ರೂ. ಮೌಲ್ಯದ ಟಿ ಶರ್ಟ್‌ ಹಾಗೂ ಶಾರ್ಟ್ಸ್ಗಳನ್ನು ಕಂಟೇನರ್‌ ಲಾರಿಯಲ್ಲಿ ಸಾಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 1ನೇ ಆರೋಪಿಯಾಗಿರುವ ಮುನಿರತ್ನಗೆ 7ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Comments are closed.