ಕರ್ನಾಟಕ

ಪ್ರತ್ಯೇಕ ಧರ್ಮಕ್ಕಾಗಿ ಜೂನ್‌ 1ರಿಂದ ಲಿಂಗಾಯತ ಜಾಗೃತಿ ಅಭಿಯಾನ

Pinterest LinkedIn Tumblr


ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಶಾಂತವಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೆ ಜೀವ ಪಡೆದುಕೊಳ್ಳಲಿದೆ. ಲಿಂಗಾಯತ ಹೋರಾಟಗಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತೆ ಹೋರಾಟ ಆರಂಭಿಸಲು ಮುಂದಾಗಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು, ಕೇಂದ್ರ ಸರ್ಕಾರ ಇನ್ನೂ ಅಧಿಕೃತ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ, ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಜೂನ್‌ 1 ರಿಂದ ಲಿಂಗಾಯತ ಜಾಗೃತಿ ಅಭಿಯಾನ ನಡೆಸಲು ಜಾಗತಿಕ ಲಿಂಗಾಯತ ಮಹಾಸಭೆ ತೀರ್ಮಾನಿಸಿದೆ.

ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ, ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಮಹಾಸಭೆಯ ಸದಸ್ಯತ್ವ ಅಭಿಯಾನವನ್ನು ಮತ್ತೆ ಜೂನ್‌ 1 ರಿಂದ ಆರಂಭಿಸಲು ನಿರ್ಧರಿಸಲಾಗಿದೆ.

ಈಗಾಗಲೇ 1 ಲಕ್ಷ ಸದಸ್ಯರನ್ನು ಮಾಡಲಾಗಿದ್ದು, ಮುಂದಿನ ಒಂದು ವರ್ಷದಲ್ಲಿ 10 ಲಕ್ಷ ಸದಸ್ಯರನ್ನುಮಾಡಲು ಮಹಾಸಭೆ ತೀರ್ಮಾನಿಸಿದೆ.

ವಿಧಾನಸಭೆ ಚುನಾವಣೆಗಾಗಿ ಧರ್ಮದ ಹೋರಾಟ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಚುನಾವಣೆಗೂ ಧರ್ಮದ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಹೋರಾಟಗಾರರು ಈಗ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಎಂ.ಬಿ. ಪಾಟೀಲ್‌, ವಿನಯ್‌ ಕುಲಕರ್ಣಿ, ಡಾ.ಶರಣ ಪ್ರಕಾಶ್‌ ಪಾಟೀಲ್‌, ಬಸವರಾಜ ರಾಯರಡ್ಡಿ ವಿರುದ್ಧ ಫ‌ಲಿತಾಂಶ ಬಂದರೆ ಹೋರಾಟದ ವೇಗ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವ ಆತಂಕ ಲಿಂಗಾಯತ ಸಮುದಾಯದ ಮುಖಂಡರಲ್ಲಿದೆ.

ಈ ಮಧ್ಯೆ, ಧರ್ಮದ ಹೋರಾಟಕ್ಕೂ ಚುನಾವಣೆ ಫ‌ಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಮ್ಮ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಈಗಾಗಲೇ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡಲು ಆಗುವುದಿಲ್ಲ ಎಂದು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಆದರೆ, ಕೇಂದ್ರ ಸರ್ಕಾರ ಲಿಂಗಾಯತರ ಬೇಡಿಕೆಯನ್ನು ತಿರಸ್ಕರಿಸುವುದು ಅಥವಾ ಪುರಸ್ಕರಿಸದೇ ಇಟ್ಟುಕೊಂಡರೆ, ಕೇಂದ್ರದ ವಿರುದ್ಧ ಹೋರಾಟ ತೀವ್ರಗೊಳಿಸುವುದು ಹಾಗೂ ಇದೇ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಲಿಂಗಾಯತ ಮುಖಂಡರು ನಿರ್ಧರಿಸಿದ್ದಾರೆ.

ವಿಧಾನಸಭೆ ಚುನಾವಣೆ ಫ‌ಲಿತಾಂಶ ಮುಗಿದು ಹೊಸ ಸರ್ಕಾರ ರಚನೆಯಾದ ಮೇಲೆ ಮಹಾಸಭೆ ಪದಾಧಿಕಾರಿಗಳ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ.
– ಬಸವರಾಜ ಹೊರಟ್ಟಿ, ಜಾಗತಿಕ ಲಿಂಗಾಯತ
ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ

ಈಗಾಗಲೇ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ತನ್ನ ತೀರ್ಮಾನ ಹೇಳುವವರೆಗೂ ಹೋರಾಟ ಮಾಡುತ್ತೇವೆ. ಜೂನ್‌ನಿಂದ ಸದಸ್ಯತ್ವ ಮುಂದುವರಿಸುವ ಮೂಲಕ ಜಾಗೃತಿ ಅಭಿಯಾನ ನಡೆಸಲಾಗುವುದು.
– ಜಿ.ಬಿ. ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ

Comments are closed.