ಕರ್ನಾಟಕ

50 ಲಕ್ಷ ಕಳವು ಮಾಡಿದ ನಕಲಿ ಅರೆಸೇನಾ ಪಡೆ ಸಿಬ್ಬಂದಿ

Pinterest LinkedIn Tumblr


ಬೆಂಗಳೂರು: ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಬಳಿಯಿದ್ದ 50 ಲಕ್ಷ ರೂ. ಕಳವು ಮಾಡಿ ಪರಾರಿಯಾಗಿರುವ ಘಟನೆ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಚಿತ್ರದುರ್ಗದ ಹಿರಿಯೂರು ಮೂಲದ ಧನುಷ್‌ (32) ಹಣ ಕಳೆದುಕೊಂಡವರು. ಗುರುವಾರ ಮಧ್ಯಾಹ್ನ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬಂದಿದ್ದ ಧನುಷ್‌ಗೆ ಅರೆಸೇನಾ ಪಡೆಯ ಸಮವಸ್ತ್ರದಲ್ಲಿದ್ದ ದುಷ್ಕರ್ಮಿಗಳು ಬ್ಯಾಗ್‌ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕರ್‌ ಎಂಬುವರರು ಹಿರಿಯೂರಿನಲ್ಲಿ ಹಾರ್ಡ್‌ವೇರ್‌ ಕಂಪೆನಿ ನಡೆಸುತ್ತಿದ್ದು, ಧನುಷ್‌ಗೆ ಮೆಜೆಸ್ಟಿಕ್‌ ಬಳಿಯ ಹೋಟೆಲ್‌ವೊಂದರಲ್ಲಿ ಮಂಜುನಾಥ್‌ ಎಂಬಾತನಿಂದ 50 ಲಕ್ಷ ರೂ. ಹಣ ಪಡೆದು ಬರಲು ಹೇಳಿದ್ದರು. ಅದರಂತೆ ಧನುಷ್‌, ಮಂಜುನಾಥ್‌ನನ್ನು ಭೇಟಿಯಾಗಿ ಹಣ ಪಡೆದು ವಾಪಸ್‌ ನಿಲ್ದಾಣದ ಕಡೆ ಹೋಗುತ್ತಿದ್ದರು.

ಇದೇ ವೇಳೆ ಹಿಂಬಾಲಿಸಿದ ಆರೋಪಿಗಳು ಧನುಷ್‌ನನ್ನು ತಡೆದು, ತಾವು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ, ನಿನ್ನ ಬಳಿ ಲಕ್ಷಾಂತರ ರೂ. ಹಣ ಇರುವ ಮಾಹಿತಿಯಿದೆ ಎಂದು ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ 50 ಲಕ್ಷ ರೂ. ಪತ್ತೆಯಾಗಿದೆ. ಈ ಹಣದ ಬಗ್ಗೆ ಮಾಹಿತಿ ಕೇಳಿದಾಗ ಧನುಷ್‌ ಗೊಂದಲದ ಹೇಳಿಕೆ ನೀಡಿದ್ದಾನೆ.

ಬಳಿಕ ಧನುಷ್‌ನನ್ನು ಉಪ್ಪಾರಪೇಟೆ ಠಾಣೆ ಬಳಿ ಕರೆತಂದ ದುಷ್ಕರ್ಮಿಗಳು, ಹತ್ತು ನಿಮಿಷ ಇಲ್ಲೇ ಕಾಯುತ್ತಿರು ಪೊಲೀಸ್‌ ಅಧಿಕಾರಿಗಳನ್ನು ಕರೆತರುವುದಾಗಿ ಹೇಳಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದರು.

ಅರ್ಧ ಗಂಟೆಯಾದರೂ ಪೊಲೀಸರು ಬಾರದಿದ್ದಾಗ ಗಾಬರಿಗೊಂಡ ಧನುಷ್‌, ಕೂಡಲೇ ಠಾಣೆಯಲ್ಲಿ ವಿಚಾರಿಸಿದ್ದು ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಪೊಲೀಸರು, ಕೃತ್ಯ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ್ದು, ಆರೋಪಿಗಳ ಚಹರೆ ಪತ್ತೆಯಾಗಿದೆ.

ಹೋಟೆಲ್‌ನಿಂದ ಅರೆಸೇನಾ ಪಡೆ ಸಮವಸ್ತ್ರದಲ್ಲಿ ಆರೋಪಿಗಳು ಧನುಷ್‌ನನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ. ಅಲ್ಲದೇ, ದಾಖಲೆ ಇಲ್ಲದ 50 ಲಕ್ಷ ರೂ. ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಧನುಷ್‌ನನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

Comments are closed.