ಕರ್ನಾಟಕ

ಮತದಾರರ ಗುರುತಿನ ಚೀಟಿ ಹಗರಣ: ಕಾಂಗ್ರೆಸ್‌ ಕಾರ್ಪೊರೇಟರ್‌ ವೆಂಕಟೇಶ್ ಬಂಧನ

Pinterest LinkedIn Tumblr


ಬೆಂಗಳೂರು: ಜಾಲಹಳ್ಳಿಯ ಎಸ್‌ಎಲ್‌ವಿ ಪಾರ್ಕ್‌ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ 9,746 ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟುಕೊಂಡಿದ್ದ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪದಲ್ಲಿ ಬಿಬಿಎಂಪಿ ಯಶವಂತಪುರ ವಾರ್ಡ್ ಕಾಂಗ್ರೆಸ್ ಸದಸ್ಯ ಜಿ.ಕೆ ವೆಂಕಟೇಶ್ ಅವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಲಿಖಿತ್ ಸೇರಿದಂತೆ ಏಳೆಂಟು ಜನರ ಮೇಲೆ ತನ್ನ ಬೆಂಬಲಿಗರ ಗುಂಪು ಕಟ್ಟಿಕೊಂಡು ವೆಂಕಟೇಶ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ವೆಂಕಟೇಶ್ ಜತೆ ಕಾಂಗ್ರೆಸ್ ಕಾರ್ಯಕರ್ತ ರಘು ಎಂಬಾತನನ್ನು ಕೂಡಾ ಬಂಧಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದರು.

ಮತದಾರರಿಂದ ಗುರುತಿನ ಚೀಟಿ ಸಂಗ್ರಹಿಸಿದ್ದಲ್ಲದೇ, ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿ ಗುರುತಿನ ಚೀಟಿಗಳನ್ನು ಕೂಡಾ ಫ್ಲ್ಯಾಟ್‌ನಲ್ಲಿ ಸಿದ್ದಪಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಪತ್ತೆಯಾದ ಗುರುತಿನ ಚೀಟಿಗಳನ್ನು ಪರಿಶೀಲನೆ ನಡೆಸುತ್ತಿರುವ ಚುನಾವಣಾಧಿಕಾರಿಗಳು, ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಿದ್ದಾರೆ.

ಬುಧವಾರ ಮಧ್ಯಾಹ್ನ, ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್, ಚುನಾವಣಾ ವೀಕ್ಷಕರು, ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರು ಮಹತ್ವದ ಸಭೆ ನಡೆಸಿದ್ದಾರೆ. ಪ್ರಕರಣದ ಕುರಿತು ಈಗಾಗಲೇ ಪ್ರಾಥಮಿಕ ವರದಿಯನ್ನು ಕೂಡಾ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಿರುವುದಾಗಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು, ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲೂ ಮನೆಗಳಲ್ಲಿ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಒಂದು ಫ್ಲ್ಯಾಟ್‌ನ ಬಾಗಿಲು ತೆಗೆದಿರಲಿಲ್ಲ. ಆದರೆ, ಒಳಗಿದ್ದವರು ಕಿಟಕಿ ತೆಗೆದು ಬಿಜೆಪಿ ಕಾರ್ಯಕರ್ತರನ್ನು ನೋಡಿ ಕಿಟಕಿ ಮುಚ್ಚಿದ್ದಾರೆ. ಇದರಿಂದ ಅನುಮಾನಗೊಂಡ ಬಿಜೆಪಿ ಕಾರ್ಯಕರ್ತರು, ತಮ್ಮ ಸ್ಥಳೀಯ ಮುಖಂಡರಿಗೆ ಮಾಹಿತಿ ನೀಡಿದ್ದರು. ಬಳಿಕ ಬಿಜೆಪಿಯ ಕಾರ್ಯಕರ್ತರು ಅಲ್ಲಿಗೆ ಬಂದಾಗ, ಕಾಂಗ್ರೆಸ್‌ನ ಕಾರ್ಯಕರ್ತರು ಹಾಗೂ ಕಾರ್ಪೊರೇಟರ್ ವೆಂಕಟೇಶ್ ಕೂಡಾ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದಾಗ, ವೆಂಕಟೇಶ್ ಸೇರಿದಂತೆ ಅವರ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

Comments are closed.