ಕರ್ನಾಟಕ

ಮತದಾನಕ್ಕೆ 58 ಸಾವಿರ ಮತಗಟ್ಟೆ; ಮಹಿಳೆಯರಿಗೆ 600 ಮತಗಟ್ಟೆ: ಚುನಾವಣಾ ಆಯೋಗ ಸಿದ್ಧತೆ

Pinterest LinkedIn Tumblr

ಬೆಂಗಳೂರು: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದ್ದು, ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಬಗ್ಗೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ರಾಜ್ಯ ಮುಖ್ಯ ಚುನವಣಾಧಿಕಾರಿ ಸಂಜೀವ್ ಕುಮಾರ್ ಅವರು, ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದಲ್ಲಿ ಮತದಾನಕ್ಕಾಗಿ ಒಟ್ಟು 58 ಸಾವಿರ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲ ಮತಗಟ್ಟೆಗಳೂ ನೆಲಮಹಡಿಯಲ್ಲೇ ಇರಲಿವೆ. ಈ 58 ಸಾವಿರ ಮತಗಟ್ಟೆಗಳ ಪೈಕಿ 600 ಮತಗಟ್ಟೆಗಳು ಮಹಿಳಾ ವಿಶೇಷ ಮತಗಟ್ಟೆಗಳಾಗಿರಲಿದ್ದು, ಇಲ್ಲಿ ಮಹಿಳಾ ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ. ಅಂತೆಯೇ ಈ ಪಿಂಕ್ ಮತಗಟ್ಟೆಗಳಲ್ಲಿ ಮಹಿಳಾ ಮತದಾರರು ಮಾತ್ರ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಇದಲ್ಲದೆ ವಿಕಲಾಂಗರಿಗೆ 10 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಅಂಗವಿಕಲ ಮತದಾರರನ್ನು ಕರೆ ತರಲು ವಾಹನ ವ್ಯವಸ್ಥೆ ಕೂಡ ಮಾಡಲಾಗಿದೆ. ಮತದಾನಕ್ಕೆ 80 ಸಾವಿರ ವಿವಿಪ್ಯಾಟ್ ಗಳನ್ನು ಬಳಕೆ ಮಾಡಲಾಗುತ್ತಿದ್ದು, ಇವುಗಳ ನಿರ್ವಹಣೆಗಾಗಿ ಹೆ್ಚ್ಚುವರಿ ಸಿಬ್ಬಂದಿಗಳನ್ನೂ ಕೂಡ ನಿಯೋಜಿಸಲಾಗಿದೆ. ಏತನ್ಮಧ್ಯೆ ಈವರೆಗೂ ಆಯೋಗದ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಸುಮಾರು 70 ಕೋಟಿ ನಗದು, 32 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಇದೇ ಮೇ 12ರಂದು ಮತದಾನ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಮೇ 15ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಂದೇ 225 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

Comments are closed.