ಕರ್ನಾಟಕ

ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ ₹ 12.5 ಕೋಟಿ ಮೌಲ್ಯದ 42 ಕೆ.ಜಿ ಚಿನ್ನ ವಶ

Pinterest LinkedIn Tumblr

ವಿಜಯಪುರ (ದೇವನಹಳ್ಳಿ ತಾ.): ಬೆಂಗಳೂರು ಗ್ರಾಮಾಂತರ ಪೊಲೀಸರು ಮತ್ತು ಜಾಗೃತ ದಳದ ಸಂಚಾರಿ ತಂಡದ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ ₹ 12.5 ಕೋಟಿ ಮೌಲ್ಯದ 42 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ. ‌

ಬೆಳಿಗ್ಗೆ 10.30ರ ಸುಮಾರಿಗೆ ಗನ್‌ಮ್ಯಾನ್ ಸೇರಿದಂತೆ ನಾಲ್ವರು ಬೊಲೆರೊ ವಾಹನದಲ್ಲಿ ಹೊಸಕೋಟೆ ಕಡೆಗೆ ತೆರಳುತ್ತಿದ್ದರು. ಚನ್ನರಾಯ
ಪಟ್ಟಣ ಹೋಬಳಿ ಬಾಲೇಪುರ ಚೆಕ್‌ಪೋಸ್ಟ್‌ನಲ್ಲಿ ವಾಹನ ತಡೆದ ಅಧಿಕಾರಿಗಳ ತಂಡ, ತಪಾಸಣೆ ನಡೆಸಿದಾಗ ಐದು ಬಾಕ್ಸ್‌ಗಳಲ್ಲಿ ಚಿನ್ನ ಪತ್ತೆಯಾಗಿದೆ.

ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ‘ಚಿನ್ನ ಹೊಸೂರಿನ ತಾನಿಷ್ಕ ಆಭರಣ ಮಳಿಗೆಗೆ ಸೇರಿದ್ದು. ಮುಂಬೈನಿಂದ ಮಳಿಗೆಗೆ ತೆಗೆದುಕೊಂಡು ಹೋಗುತ್ತಿದ್ದೆವು’ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. ದರೆ, ದಾಖಲೆ ಇಲ್ಲದ ಕಾರಣ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

₹10.8 ಲಕ್ಷ ಜಪ್ತಿ: ಆನೇಕಲ್ ಬಳಿ ಸರ್ಜಾಪುರ ಚೆಕ್‌ಪೋಸ್ಟ್‌ನಲ್ಲಿ ಮತ್ತೊಂದು ಕಾರ್ಯಾಚರಣೆಯಲ್ಲಿ ಜಾಗೃತ ದಳ ₹10.8 ಲಕ್ಷ ನಗದು ವಶಕ್ಕೆ ಪಡೆದಿದೆ.ರಿಯಲ್ ಎಸ್ಟೇಟ್ ಉದ್ಯಮಿ ಎನ್‌.ಕುಮಾರ್ ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ದಾಖಲೆ ಇರದ ಕಾರಣ ಹಣ ವಶಪಡಿಸಿಕೊಳ್ಳಲಾಗಿದೆ.

ಮುಂದುವರಿದ ಐ.ಟಿ ದಾಳಿ

ಬೆಂಗಳೂರು: ಗುತ್ತಿಗೆದಾರರ ವಿರುದ್ಧ ತೀವ್ರ ಕಾರ್ಯಾಚರಣೆ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರಿನಲ್ಲಿ ಸಾಗಿಸುತ್ತಿದ್ದ ₹ 1.2 ಕೋಟಿ ಸೇರಿದಂತೆ ಲೆಕ್ಕ ಇಡದ ₹ 4.01 ಕೋಟಿ ಹಣ ಮತ್ತು 6.5 ಕೆ.ಜಿ ಚಿನ್ನಾಭರಣಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಗುರುವಾರ ಮೈಸೂರು, ಬೆಂಗಳೂರು ಮತ್ತು ದಾವಣಗೆರೆಯ ಮೂವರು ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಶುಕ್ರವಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಸಮಯದಲ್ಲಿ ಲೆಕ್ಕ ಇಡದ ಹಣ ಸಿಕ್ಕಿದೆ. ಹಣ ಸಾಗಿಸುತ್ತಿದ್ದ ಕಾರನ್ನು ಬೆನ್ನಟ್ಟಿ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೊಡ್ಡ ಮುಖಬೆಲೆ ನೋಟುಗಳನ್ನು ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಅನುಸರಿಸಿ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಜಪ್ತಿ ಮಾಡಿರುವ ಹಣವನ್ನು ಬೋಗಸ್‌ ಉಪ ಗುತ್ತಿಗೆದಾರರ ಬಿಲ್‌ ಪಾವತಿ, ಖೊಟ್ಟಿ ಕಾರ್ಮಿಕರ ವೇತನ ಪಾವತಿ ಮತ್ತು ನಿಗದಿಗಿಂತ ಹೆಚ್ಚಿನ ದರ ನೀಡಿ ಕೆಲವು ವಸ್ತುಗಳನ್ನು ಖರೀ‌ದಿಸಿದಂತೆ ತೋರಿಸುವ ದಾಖಲೆ ಸೃಷ್ಟಿಸಿ ಸಂಗ್ರಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

Comments are closed.