ಕರ್ನಾಟಕ

ಕ್ಷುಲ್ಲಕ ವಿಚಾರಕ್ಕೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ : ಓರ್ವ ಬಲಿ- ನಾಲ್ವರಿಗೆ ಗಾಯ

Pinterest LinkedIn Tumblr

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿ ಕೋಟಾಲದಿನ್ನೆಯ ಹೊರವಲಯದ (ಬೊಮ್ಮಶೆಟ್ಟಿಹಳ್ಳಿ ಸಮೀಪ) ಬಾರ್ ಒಂದರಲ್ಲಿ ಗುರುವಾರ ರಾತ್ರಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಜೆಡಿಎಸ್ ಕಾರ್ಯಕರ್ತ ಹಳೆಉಪ್ಪಾರಹಳ್ಳಿ ನಿವಾಸಿ ರಾಮರೆಡ್ಡಿ (27) ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ಹಳೆಉಪ್ಪಾರಹಳ್ಳಿ ರೌಡಿಶೀಟರ್ ರಮೇಶ್ (33) ಹಾಗೂ ಈತನ ಸ್ನೇಹಿತರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಕ್ಷುಲ್ಲಕ ವಿಚಾರಕ್ಕಾಗಿ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿದೆ ಎಂದು ತಿಳಿದು ಬಂದಿದೆ.

ರಮೇಶ್ ಗುಂಪು ರಾಮರೆಡ್ಡಿ ಅವರ ಗುಂಪಿನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದೆ. ಈ ವೇಳೆ ರಾಮರೆಡ್ಡಿ ಸೇರಿದಂತೆ ನರೇಂದ್ರ (32), ಮಂಜುನಾಥ್(28), ಅಂಬರೀಷ್ (30) ಎಂಬುವರು ಗಾಯಗೊಂಡಿದ್ದಾರೆ.

ಈ ಪೈಕಿ ಸದ್ಯ ನರೇಂದ್ರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ರಾಮರೆಡ್ಡಿ ಅವರಿಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಮೇ.5 ರಂದು ಮದುವೆ ನಿಗದಿಯಾಗಿತ್ತು ಎಂದು ಸಂಬಂಧಿಕರು ತಿಳಿಸಿದರು.

ಆರೋಪಿ ರಮೇಶ್‌ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಗ್ರಾಮಾಂತರ ಪೊಲೀಸ್ ಠಾಣೆಯ ಜೀಪಿನ ಗಾಜನ್ನು ಜಖಂಗೊಳಿಸಿದ್ದಾರೆ. ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಘಟನೆ ಖಂಡಿಸಿ ಶುಕ್ರವಾರ ನಗರದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುತ್ತಿದ್ದು, ಪಟ್ಟಣಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಹ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಪಟ್ಟಂತೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Comments are closed.