ಕರ್ನಾಟಕ

224 ಕ್ಷೇತ್ರಗಳಿಗೆ 2407 ನಾಮಪತ್ರ; 25 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಬಂಡಾಯದ ಬಿಸಿ

Pinterest LinkedIn Tumblr

ಬೆಂಗಳೂರು: ಹಲವು ನಾಟಕೀಯ ಬೆಳವಣಿಗೆಗಳ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಬರೊಬ್ಬರಿ 2407 ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಮೊಳಕಾಲ್ಮೂರಿನಲ್ಲಿ ಅಭ್ಯರ್ಥಿಯಾಗುವ ಮೂಲಕ ಸ್ಥಳೀಯ ನಾಯಕ ತಿಪ್ಪೇ ಸ್ವಾಮಿ ಆಕ್ರೋಶಕ್ಕೆ ಕಾರಣರಾಗಿದ್ದ ಬಿ ಶ್ರೀರಾಮುಲು ನಿನ್ನೆ ಬಾದಾಮಿಯಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಆ ಮೂಲಕ ಚುನಾವಣೆ ಅಖಾಡಕ್ಕೆ ‘ಹೈ ವೋಲ್ಟೇಜ್‌’ ಹರಿಸಿದ್ದಾರೆ. ಇನ್ನೊಂದೆಡೆ ವರುಣಾದಲ್ಲಿ ಹವಾ ಸೃಷ್ಟಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಕೊನೆಯ ಕ್ಷಣದಲ್ಲಿ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿದ್ದರಿಂದ ತೋಟದಪ್ಪ ಬಸವರಾಜ್‌ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟಾರೆಯಾಗಿ 2407 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು 27ರವರೆಗೆ ಅವಕಾಶವಿದೆ.

25 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಬಂಡಾಯದ ಬಿಸಿ
ಇನ್ನು ಸಾಮಾನ್ಯದಂತೆ ಹಾಲಿ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳಿಗೆ ಬಂಡಾಯ ಬಿಸಿ ಜೋರಾಗಿಯೇ ಇದ್ದು, ಒಟ್ಟು 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮದ ಪಕ್ಷದ ಬಂಡಾಯ ಅಭ್ಯರ್ಥಿಗಳಿಂದ ಸ್ಪರ್ಧೆ ಎದುರಿಸುವಂತಾಗಿದೆ. ಮತ್ತೊಂದೆಡೆ ಜೆಡಿಎಸ್‌ ‘ಬಿ’ ಫಾರಂ ವಿತರಣೆ ಗೊಂದಲದಲ್ಲಿ ಸಿಲುಕಿದ್ದು, ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಬಿ-ಫಾರಂ ಮತ್ತು ಸಿ-ಫಾರಂಗಳನ್ನು ವಿತರಿಸಿ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ. ಹೀಗಾಗಿ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಎಂಬುದು ಚುನಾವಣಾ ಆಯೋಗದ ತೀರ್ಮಾನದ ಬಳಿಕವೇ ಸ್ಪಷ್ಟವಾಗಬೇಕಿದೆ.

Comments are closed.